ಮನೆ ರಾಷ್ಟ್ರೀಯ 21ನೇ ಶತಮಾನದ ಅತ್ಯಂತ ದೊಡ್ಡ ನಿರ್ಧಾರ; ಮಹಿಳಾ ಮೀಸಲಾತಿಯನ್ನು ಹಾಡಿ ಹೊಗಳಿದ – ಮೋದಿ

21ನೇ ಶತಮಾನದ ಅತ್ಯಂತ ದೊಡ್ಡ ನಿರ್ಧಾರ; ಮಹಿಳಾ ಮೀಸಲಾತಿಯನ್ನು ಹಾಡಿ ಹೊಗಳಿದ – ಮೋದಿ

0

ನವದೆಹಲಿ : ಮಹಿಳಾ ಮೀಸಲಾತಿಯನ್ನು ಜಾರಿಗೆ ತರುತ್ತಿರುವುದು 21ನೇ ಶತಮಾನದ ಅತ್ಯಂತ ದೊಡ್ಡ ನಿರ್ಧಾರಗಳಲ್ಲಿ ಒಂದು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ‘ನಾರಿ ಶಕ್ತಿ ವಂದನ್ ಸಮ್ಮೇಳನ’ ಉದ್ದೇಶಿಸಿ ಮಾತನಾಡಿದ ಅವರು, ಮಹಿಳಾ ಮೀಸಲಾತಿಯು ಕೇವಲ ಒಂದು ರಾಜಕೀಯ ಘೋಷಣೆಯಾಗಿ ಉಳಿಯದೆ, ಆಡಳಿತದಲ್ಲಿ ಸಾಮಾಜಿಕ ನ್ಯಾಯವನ್ನು ತರುವ ಪ್ರಮುಖ ಹೆಜ್ಜೆಯಾಗಲಿದೆ ಎಂದು ತಿಳಿಸಿದರು.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ‘ಮಹಿಳಾ ನೇತೃತ್ವದ ಅಭಿವೃದ್ಧಿ’ ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಮಹಿಳೆಯರು ಕೇವಲ ಫಲಾನುಭವಿಗಳಾಗಬಾರದು. ದೇಶದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪೂರ್ಣ ಪ್ರಮಾಣದ ಪಾಲುದಾರರಾಗಬೇಕು ಎನ್ನುವುದು ಸರ್ಕಾರದ ಗುರಿ ಎಂದು ಹೇಳಿದರು.

ಮಹಿಳಾ ಮೀಸಲಾತಿಯ ಅನುಷ್ಠಾನದ ಬಗ್ಗೆ ಚರ್ಚಿಸಲು ಏಪ್ರಿಲ್ 16 ರಿಂದ 18 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದ್ದು, ಇದು ಹೊಸ ಇತಿಹಾಸ ಸೃಷ್ಟಿಸಲಿದೆ ಎಂದು ತಿಳಿಸಿದರು. ಭಾರತದ ಹೆಣ್ಣುಮಕ್ಕಳು ತಮ್ಮ ಪರಿಶ್ರಮ ಮತ್ತು ಧೈರ್ಯದಿಂದ ಹೊಸ ಎತ್ತರಕ್ಕೆ ಏರುತ್ತಿದ್ದಾರೆ.

‘ಲಕ್‌ಪತಿ ದೀದಿ’ ಮತ್ತು ‘ಡ್ರೋನ್ ದೀದಿ’ ಯಂತಹ ಯೋಜನೆಗಳು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಬಲ ನೀಡಿವೆ ಎಂದು ಶ್ಲಾಘಿಸಿದರು. ಮಹಿಳಾ ಮೀಸಲಾತಿ ಕಾಯ್ದೆಯನ್ನು2029ರ ಲೋಕಸಭೆ ಚುನಾವಣೆ ಮತ್ತು ಅದಕ್ಕೂ ಮುನ್ನ ನಡೆಯುವ ವಿಧಾನಸಭಾ ಚುನಾವಣೆಗಳ ವೇಳೆಗೆ ಸಂಪೂರ್ಣವಾಗಿ ಜಾರಿಗೆ ತರುವುದು ಸರ್ಕಾರದ ಗುರಿ ಎಂದು ಸ್ಪಷ್ಟಪಡಿಸಿದರು.