ಕೊಲ್ಕತ್ತಾ : ಕೊಲ್ಕತ್ತಾದ ಹೃದ್ರೋಗ ತಜ್ಞರೊಬ್ಬರು ತಮ್ಮ ಕ್ಲಿನಿಕ್ನಲ್ಲಿ “ಜೈ ಶ್ರೀ ರಾಮ್” ಎಂದು ಹೇಳುವ ರೋಗಿಗಳಿಗೆ ಶುಲ್ಕದಲ್ಲಿ 500 ರೂ. ರಿಯಾಯಿತಿ ನೀಡುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ವೈದ್ಯರ ನಡೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಕೊಲ್ಕತ್ತಾದ ಹೃದ್ರೋಗ ತಜ್ಞ ಡಾ. ಪಿ. ಕೆ. ಹಜ್ರಾ ತಮ್ಮ ಖಾಸಗಿ ಕ್ಲಿನಿಕ್ನಲ್ಲಿ ಬಿಳಿ ಕೋಟ್ ಧರಿಸಿ, ಅದರ ಮೇಲೆ ಬಿಜೆಪಿಯ ಚಿಹ್ನೆ ಇರುವ ಶಾಲು ಹಾಕಿಕೊಂಡಿರುವ ಪೋಸ್ಟರ್ ಹಾಕಿಕೊಂಡಿದ್ದಾರೆ. ಆ ಪೋಸ್ಟರ್ ಮೇಲೆ ಜೈ ಶ್ರೀರಾಮ್ ಎಂದು ಹೇಳುವ ರೋಗಿಗಳಿಗೆ 500 ರೂ. ಡಿಸ್ಕೌಂಟ್ ನೀಡುವುದಾಗಿ ಘೋಷಿಸಿದ್ದಾರೆ. ಈ ಆಫರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿಯೂ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ಡಾ. ಹಜ್ರಾ, “ಹಲವು ವರ್ಷಗಳಲ್ಲಿ ವೈದ್ಯನಾಗಿ ಕೆಲಸ ಮಾಡಿರುವ ನಾನು ಬಿಜೆಪಿಯ ಅನುಯಾಯಿ. ಜೈ ಶ್ರೀರಾಮ್ ಎಂಬುದು ರಾಜಕೀಯ ಘೋಷಣೆಯೇ ವಿನಃ ಧಾರ್ಮಿಕ ಘೋಷಣೆಯಲ್ಲ. ಹೀಗಾಗಿ, ಯಾವ ಧರ್ಮದವರು ಬೇಕಾದರೂ ಈ ಘೋಷಣೆ ಕೂಗಬಹುದು.
ಬಂಗಾಳದ ರೋಗಿಗಳು ಅಸ್ಸಾಂ, ಒಡಿಶಾ ಅಥವಾ ದಕ್ಷಿಣ ಭಾರತಕ್ಕೆ ಹೋಗುವುದನ್ನು ನಾನು ನೋಡಿದಾಗಲೆಲ್ಲಾ ನನಗೆ ಬೇಸರವಾಗುತ್ತದೆ. ಹೀಗಾಗಿ, ನನ್ನ ರೋಗಿಗಳಿಗೂ ಸಹಾಯವಾಗಲೆಂದು 500 ರೂ. ರಿಯಾಯಿತಿ ಘೋಷಿಸಿದ್ದೇನೆ. ನನ್ನ ಕನ್ಸಲ್ಟೇಷನ್ ಫೀಸ್ 2000 ರೂ. ಆದರೆ, ಜೈ ಶ್ರೀರಾಮ್ ಹೇಳಿದವರಿಗೆ 1,500 ರೂ. ಶುಲ್ಕ ವಿಧಿಸುತ್ತೇನೆ. ಇದರಿಂದ ನನಗೂ ಲಾಭ, ಅವರಿಗೂ ಲಾಭ ಎಂದು ಅವರು ತಿಳಿಸಿದ್ದಾರೆ.















