ಮನೆ ಸುದ್ದಿ ಜಾಲ ಹನುಮನ ಭಕ್ತರ ಗಮನಕ್ಕೆ; ಅಂಜನಾದ್ರಿಗೆ ಬರುವ ಭಕ್ತರಿಗೆ ಸಮಯ ನಿಗದಿ..!

ಹನುಮನ ಭಕ್ತರ ಗಮನಕ್ಕೆ; ಅಂಜನಾದ್ರಿಗೆ ಬರುವ ಭಕ್ತರಿಗೆ ಸಮಯ ನಿಗದಿ..!

0

ಕೊಪ್ಪಳ : ಆಂಜನೇಯನ ಜನ್ಮಸ್ಥಳ ಕೊಪ್ಪಳದ ಅಂಜನಾದ್ರಿಯಲ್ಲಿ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೀಗಾಗಿ ಬೆಟ್ಟ ಏರುವ ಭಕ್ತರು ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗುತ್ತಿದ್ದು, ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೊಪ್ಪಳ ಜಿಲ್ಲಾಡಳಿತ, ಮಧ್ಯಾಹ್ನದ ವೇಳೆ ಬೆಟ್ಟ ಏರುವುದನ್ನು ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ಪ್ರತಿದಿನ ಬೆಳಗ್ಗೆ 11 ಗಂಟೆಯೊಳಗೆ ಮತ್ತು ಸಂಜೆ ನಾಲ್ಕು ಗಂಟೆಯ ಬಳಿಕ ಮಾತ್ರ ಭಕ್ತರಿಗೆ ಬೆಟ್ಟ ಏರಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಇದೇ ಸಮಯದಲ್ಲಿ ಭಕ್ತರು ಬಂದ್ರೆ ಮಾತ್ರ ಅಂಜನಾದ್ರಿ ಬೆಟ್ಟ ಹತ್ತಬಹುದು.

ಅಂಜನಾದ್ರಿ ದೇವರ ದರ್ಶನಕ್ಕೆಂದು ಸ್ಥಳೀಯರು ಮಾತ್ರವಲ್ಲ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಇನ್ನು ಮುಂದೆ ಹನುಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಸಮಯದ ಬ್ರೇಕ್ ಬೀಳಲಿದೆ. ಸದ್ಯಕ್ಕೆ ಸಮಯ ಮಿತಿ ಇಲ್ಲದೇ ದೇವರ ದರ್ಶನಕ್ಕೆ ಹೋಗುತ್ತಿರುವ ಭಕ್ತರಿಗೆ ಇನ್ಮುಂದೆ ಸಮಯ ನಿಗದಿ ಮಾಡಲಾಗಿದ್ದು, ಬೆಳಗ್ಗೆ 11 ಗಂಟೆ ವರೆಗೆ ಮಾತ್ರ ಬೆಟ್ಟ ಹತ್ತು ಸಮಯ ನಿಗದಿಪಡಿಸಲಾಗಿದೆ. ಬಳಿಕ ಸಂಜೆ 4 ಗಂಟೆಗೆ ಅಂಜನಾದ್ರಿ ಬೆಟ್ಟ ಗೇಟ್ ಓಪನ್ ಆಗಲಿದೆ.

ಹನುಮನ ಜನ್ಮಭೂಮಿ, ಗಂಗಾವತಿ ತಾಲೂಕಿನ ಹನುಮನಹಳ್ಳಿಯಲ್ಲಿರುವ ಅಂಜನಾದ್ರಿ ಪರ್ವತ ಈಗ ಅಕ್ಷರಶಃ ಕೆಂಡದಂತಾಗಿದೆ. ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು, 575 ಮೆಟ್ಟಿಲುಗಳನ್ನು ಹತ್ತಿ ಹನುಮನ ದರ್ಶನ ಪಡೆಯಬೇಕಿದೆ. ಆದರೆ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ಬೆಟ್ಟ ಏರುವ ಭಕ್ತರಲ್ಲಿ ತೀವ್ರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ನಿರ್ಜಲೀಕರಣ ಮತ್ತು ಸುಸ್ತಿನಿಂದಾಗಿ ಹಲವರು ಮೆಟ್ಟಿಲುಗಳ ಮೇಲೆಯೇ ಕುಸಿದು ಬಿದ್ದಿದ್ದಾರೆ. ಕೆಲ ಭಕ್ತರು ಹೃದಯಾಘಾತದಿಂದ ಸಾವನ್ನಪ್ಪಿದ್ದು ಇದೆ. ಈ ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿದ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಹೊಸ ಆದೇಶ ಜಾರಿ ಮಾಡಿದ್ದಾರೆ. ​ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ಭಕ್ತರಿಗೆ ಬೆಟ್ಟ ಏರಲು ಪ್ರವೇಶ ನಿಷೇಧಸಿದ್ದಾರೆ.

ಸಂಜೆ 4 ಗಂಟೆಯ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ‌. ​ಜಿಲ್ಲಾಡಳಿತದ ಈ ನಿರ್ಧಾರವನ್ನು ಭಕ್ತರು ಸ್ವಾಗತಿಸಿದ್ದಾರೆ. ಪ್ರಾಣಾಪಾಯ ತಡೆಯಲು ಈ ಕ್ರಮ ಅನಿವಾರ್ಯವಾಗಿತ್ತು ಅನ್ನೋದು ಕೆಲ ಪ್ರವಾಸಿಗರ ಅಭಿಪ್ರಾಯವಾಗಿದೆ. ಬಿಸಿಲು ತುಂಬಾ ಜಾಸ್ತಿ ಇದೆ, ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿಗಳ ನಿರ್ಧಾರ ಒಳ್ಳೆಯದು. ಆದರೆ ಬೆಟ್ಟದ ಮೇಲೆ ತುರ್ತು ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಭಕ್ತರು ಮನವಿ ಮಾಡಿದ್ದಾರೆ. ಬೇಸಿಗೆಯ ಪ್ರಖರತೆ ಕಡಿಮೆಯಾಗುವವರೆಗೂ ಹನುಮಪ್ಪನ ದರ್ಶನಕ್ಕೆ ಬರುವ ಭಕ್ತರು ಸಮಯದ ಬದಲಾವಣೆಯನ್ನು ಗಮನಿಸಬೇಕಾದ ಅನಿವಾರ್ಯತೆಯಿದೆ.