ಬೆಂಗಳೂರು : ಬಿಎನ್‌ಎಸ್‌ಎಸ್‌ನ ಸೆಕ್ಷನ್ 193(2) ರ ಪ್ರಕಾರ, ಪೋಕ್ಸೊ ಕಾಯ್ದೆಯಡಿಯಲ್ಲಿ ಆರೋಪಿಯು 60 ದಿನಗಳಲ್ಲಿ ತನಿಖೆ ಪೂರ್ಣಗೊಳ್ಳದಿದ್ದರೆ ಶಾಸನಬದ್ಧ ಜಾಮೀನಿಗೆ ಅರ್ಹರಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಕಾನೂನುಬದ್ಧ ಅವಧಿಯೊಳಗೆ ತನಿಖೆ ಪೂರ್ಣಗೊಳ್ಳದ ಕಾರಣ ಗೋವಿಂದ ಎಂಬವರು ಡೀಫಾಲ್ಟ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ಆದೇಶ ಹೊರಡಿಸಿದ್ದಾರೆ.
ಪೋಕ್ಸೋ ಕಾಯಿದೆಯಂತಹ ವಿಶೇಷ ಕಾನೂನುಗಳ ಅಡಿಯಲ್ಲಿನ ಕಾಲಮಿತಿಗಳು ಸಂತ್ರಸ್ತ-ಕೇಂದ್ರಿತವಾಗಿವೆ. ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಲಾಗಿದೆಯೇ ಹೊರತು, ಆರೋಪಿಗಳು ತಪ್ಪಿಸಿಕೊಳ್ಳಲು ದಾರಿ ಮಾಡಿಕೊಡಲು ಅಲ್ಲ ಎಂದು ನ್ಯಾಯಶಾಸ್ತ್ರವು ನಿರಂತರವಾಗಿ ಒತ್ತಿಹೇಳುತ್ತದೆ. ಶಾಸನಬದ್ಧ ಜಾಮೀನು ಪಡೆಯಲು ಅರ್ಜಿದಾರರು ಬಿಎನ್‌ಎಸ್‌ಎಸ್ ನ ಕಲಂ 193(2) ರ ಸಹಾಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ. ಎಫ್‌ಎಸ್‌ಎಲ್ ಅಥವಾ ಸಿಡಿಆರ್‌ನ ವರದಿಗಳಿಲ್ಲದೆ ಚಾರ್ಜ್‌ಶೀಟ್ ಸಲ್ಲಿಸುವುದರಿಂದ ಕಾನೂನಿನ ದೃಷ್ಟಿಯಲ್ಲಿ ಅಂತಿಮ ವರದಿಯಾಗಿ ಆರೋಪಿಗೆ ಶಾಸನಬದ್ಧ ಜಾಮೀನು ಪಡೆಯುವ ಹಕ್ಕನ್ನು ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ ಅಂತಿಮ ವರದಿಯನ್ನು ಸಲ್ಲಿಸಲು 60 ದಿನಗಳ ಕಾಲಮಿತಿ ಮತ್ತು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ಇರುವ ಪ್ರಕರಣಗಳಲ್ಲಿ 90 ದಿನಗಳ ಕಾಲಮಿತಿ ಇರುವುದನ್ನು ಉಲ್ಲೇಖಿಸಿದ ನ್ಯಾಯಾಲಯವು, ಗೋವಿಂದ ಎನ್ನುವವರ ಪ್ರಕರಣದಲ್ಲಿ 90 ದಿನಗಳ ಒಳಗಾಗಿ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಕೆಯಾಗಿರುವುದರಿಂದ ಮತ್ತು ಅದು ಅಪೂರ್ಣವಾಗಿದೆ ಎಂಬ ಅಂಶವು ‘ಡಿಫಾಲ್ಟ್ ಜಾಮೀನು’ ಪಡೆಯಲು ಕಾನೂನುಬದ್ಧವಾಗಿ ಯಾವುದೇ ಪರಿಣಾಮ ಬೀರದ ಕಾರಣ ಸದರಿ ಆಧಾರದ ಮೇಲೆ ಅರ್ಜಿದಾರರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಈ ವಿಚಾರಣಾ ನ್ಯಾಯಾಲಯವು ಡಿಸೆಂಬರ್ 2025 ಮತ್ತು ಜನವರಿ 2026 ರಲ್ಲಿ ಎರಡು ಸಂದರ್ಭಗಳಲ್ಲಿ ಜಾಮೀನು ನೀಡಲು ನಿರಾಕರಿಸಿದ್ದರಿಂದ ಆರೋಪಿಯು ಹೈಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ದೂರುದಾರರ ಮಗಳು ಸುಮಾರು ಒಂದು ವರ್ಷ ಆಸ್ಪತ್ರೆಯಲ್ಲಿ ಮನೆಗೆಲಸದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿಯೇ ಆರೋಪಿಯು ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿದ್ದ ಎಂದು ಆರೋಪಿಸಲಾಗಿದೆ. ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಆಕೆ ಅಪ್ರಾಪ್ತೆ ಎಂದು ತಿಳಿದಿದ್ದೂ ಸಹ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದ ಎನ್ನಲಾಗಿದೆ. ನಂತರ ಅಕ್ಟೋಬರ್ 2025 ರಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವೇಳೆ ಆಕೆ ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ. ಆದ್ದರಿಂದ, ದೂರಿನ ನಂತರ ಆರೋಪಿಯನ್ನು ಬಂಧಿಸಿ 2025 ರ ಅಕ್ಟೋಬರ್‌ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.















