ಬೆಂಗಳೂರು : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳ ಒಟ್ಟು 890 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದ್ದು, ಮೇ 10ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ಈ ಕುರಿತು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದು, ಕಲ್ಯಾಣ ಕರ್ನಾಟಕ ಮತ್ತು ಇತರ ಮೂಲ ವೃಂದ ಸೇರಿ ಎಲ್ಲರಿಗೂ ಅರ್ಜಿ ಸಲ್ಲಿಸಲು ಮೇ 10 ಕೊನೆ ದಿನ. ಶುಲ್ಕ ಪಾವತಿಗೆ ಮೇ 12 ಕೊನೆ ದಿನ ಎಂದು ತಿಳಿಸಿದ್ದಾರೆ.
ಉಳಿಕೆ ಮೂಲ ವೃಂದದ, ಗ್ರೂಪ್- ಬಿಗೆ ಸೇರಿದ ಒಟ್ಟು 632 ಹುದ್ದೆಗಳಿಗೆ (81 ಕೃಷಿ ಅಧಿಕಾರಿ ಹಾಗೂ 551 ಸಹಾಯಕ ಕೃಷಿ ಅಧಿಕಾರಿ) ಜೂ.7ರಂದು ಹಾಗೂ ಕಲ್ಯಾಣ ಕರ್ನಾಟಕ ವೃಂದದ ಒಟ್ಟು 258 ಹುದ್ದೆಗಳಿಗೆ (40 ಕೃಷಿ ಅಧಿಕಾರಿ ಹಾಗೂ 218 ಸಹಾಯಕ ಕೃಷಿ ಅಧಿಕಾರಿ) ಜೂ.14ರಂದು ಲಿಖಿತ ಪರೀಕ್ಷೆ ಇರುತ್ತದೆ. ಎರಡೂ ವೃಂದದವರಿಗೆ ಕನ್ನಡ ಪರೀಕ್ಷೆ ಜೂ.6ರಂದು ನಡೆಯಲಿದೆ ಎಂದು ವಿವರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್ ಸೈಟ್‌ಗೆ ಭೇಟಿ ನೀಡಲು ಕೋರಲಾಗಿದೆ.















