ಬೆಂಗಳೂರು : 2025-26ನೆ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಇಂದು (ಏ.23) ಪ್ರಕಟಗೊಂಡಿದೆ. ಈ ಬಾರಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಇದೇ ವಿಚಾರವನ್ನೀಗ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಅಸ್ತ್ರಮಾಡಿಕೊಂಡಿದ್ದು, ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಗುರಿಯಾಗಿಸಿ ವಾಗ್ದಾಳಿ ನಡೆಸಿವೆ. ಸ್ವಂತ ಜಿಲ್ಲೆಯ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಖರ್ಗೆ ಕುಟುಂಬ ವಿಫಲವಾಗಿದೆ ಎಂದು ವ್ಯಂಗ್ಯವಾಡಿವೆ.
SSLC ಫಲಿತಾಂಶದಲ್ಲಿ ಕಲಬುರಗಿ 35 ಅಂದರೆ ಕೊನೆಯ ಸ್ಥಾನ ಪಡೆದಿದ್ದು, ಹಿಂದಿನ ಸಾಲಿನಲ್ಲಿಯೂ 34ನೇ ಸ್ಥಾನದಲ್ಲಿತ್ತು. 4-5 ದಶಕಗಳಿಂದ ಕಲಬುರಗಿ ಜಿಲ್ಲೆ ಆಳುತ್ತಿರುವ ಖರ್ಗೆ ಕುಟುಂಬ ಸ್ವಂತ ಜಿಲ್ಲೆಯ ಮಕ್ಕಳ ಭವಿಷ್ಯ ರೂಪಿಸುವಲ್ಲಿ ವಿಫಲವಾಗಿರುವುದು ನಾಚಿಕೆಗೇಡಿನ ಸಂಗತಿ. ಕಲಬುರಗಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ, ಶಿಕ್ಷಕರ ನೇಮಕ ಸೇರಿದಂತೆ ಶಿಕ್ಷಣದ ಪ್ರಗತಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ JDS ಆಕ್ರೋಶ ವ್ಯಕ್ತಪಡಿಸಿದೆ.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಅವರೇ, ನಿಮ್ಮ ಭಾಷಣದ ‘ಸಾಧನೆ’ಗೆ ಈ ಫಲಿತಾಂಶವನ್ನು ಸೇರಿಸಿಕೊಳ್ಳಿ. ಕಲಬುರಗಿಯನ್ನು ಅಕ್ಷರಶಃ ಶೈಕ್ಷಣಿಕ ಅಂಧಕಾರಕ್ಕೆ ದೂಡಿದ್ದೀರಿ. ಮಾತಿನಲ್ಲಿ ತೋರಿಸುವ ಶೌರ್ಯ ಶಿಕ್ಷಣದ ಸುಧಾರಣೆಯಲ್ಲಿ ತೋರಿಸಿ ಎಂದಿರುವ ಜೆಡಿಎಸ್ ಪ್ರಿಯಾಂಕ್ ಖರ್ಗೆಯನ್ನು ನಾಟಿಕೋಳಿ ಮಿನಿಸ್ಟರ್ ಎಂದು ವ್ಯಂಗ್ಯವಾಡಿದೆ. ಮತ್ತೊಂದೆಡೆ ಫಲಿತಾಂಶ ಸಂಬಂಧ ವಿಪಕ್ಷ ಬಿಜೆಪಿಯೂ ತನ್ನ ಎಕ್ಸ್ ಖಾತೆಯ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾಲೆಳೆದಿದೆ. ಪ್ರಿಯಾಂಕ್ ರಿಸಲ್ಟ್ ವೀಕ್ಷಿಸುತ್ತಿರುವಂತಹ ಫೋಟೋ ಜೊತೆಗೆ SSLC ಫಲಿತಾಂಶ ಬಂದಿದೆ. ಟ್ವೀಟ್ ಮಾಡಿ ಖರ್ಗೆ ಎಂಬ ಶೀರ್ಷಿಕೆಯ ಜೊತೆ ಪೋಸ್ಟ್ ಮಾಡಿದೆ.














