ಮನೆ ರಾಜ್ಯ ಬರ್ತ್‌ಡೇ ಬಾಯ್ ಡಿಕೆಶಿಗೆ ಹೈಕಮಾಂಡ್ ‘ಬಂಪರ್ ಗಿಫ್ಟ್’ – ಕುಣಿಗಲ್ ಶಾಸಕ ರಂಗನಾಥ್

ಬರ್ತ್‌ಡೇ ಬಾಯ್ ಡಿಕೆಶಿಗೆ ಹೈಕಮಾಂಡ್ ‘ಬಂಪರ್ ಗಿಫ್ಟ್’ – ಕುಣಿಗಲ್ ಶಾಸಕ ರಂಗನಾಥ್

0

ಬೆಂಗಳೂರು : ಕಾಂಗ್ರೆಸ್‌ನಲ್ಲಿನ ರಾಜಕೀಯ ಬೆಳವಣಿಗೆಗಳು ಮತ್ತು ನಾಯಕತ್ವ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಶೀಘ್ರದಲ್ಲೇ ಒಳ್ಳೆಯ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸಿಎಂ ಸ್ಥಾನ ಬದಲಾವಣೆಯ ವದಂತಿಗಳಿಗೆ ಅವರು ಪರೋಕ್ಷವಾಗಿ ಪುಷ್ಟಿ ನೀಡಿದ್ದಾರೆ.

“ನಾವು ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು, ಫಲಾಫಲಗಳನ್ನು ದೇವರಿಗೆ ಬಿಡಬೇಕು. ಅದೇ ರೀತಿ ನಮ್ಮ ಡಿ.ಕೆ. ಶಿವಕುಮಾರ್ ಸಾಹೇಬರು ಪಕ್ಷದ ಜವಾಬ್ದಾರಿಯನ್ನು ಹೊತ್ತು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮುಂಬರುವ ದಿನಗಳಲ್ಲಿ ಒಳ್ಳೆಯ ಸ್ಥಾನ ಸಿಗಬೇಕು ಎನ್ನುವುದು ನಮ್ಮೆಲ್ಲರ ನಿರೀಕ್ಷೆಯಾಗಿದೆ. ಹೈಕಮಾಂಡ್ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸ ನಮಗಿದೆ” ಎಂದು ರಂಗನಾಥ್ ಹೇಳಿದರು.

ಮುಂದುವರಿದು ಮಾತನಾಡಿದ ಅವರು, “ಮೇ 15 ರಂದು ಡಿ.ಕೆ. ಶಿವಕುಮಾರ್ ಅವರ ಜನ್ಮದಿನವಿದೆ. ಅಷ್ಟರೊಳಗೆ ಅವರಿಗೆ ಯಾವುದಾದರೂ ಸಂತೋಷದ ವಿಚಾರ ಅಥವಾ ‘ಸಿಹಿ ಸುದ್ದಿ’ ಬರಬಹುದು ಎಂಬ ಆಶಯ ನಮ್ಮದಾಗಿದೆ” ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಒಪ್ಪಂದದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ಒಂದು ಒಪ್ಪಂದವಾಗಿದೆ ಎಂಬ ವಿಚಾರ ಎಲ್ಲರ ತಲೆಯಲ್ಲೂ ಇದೆ. ಆದರೆ, ಆ ಒಪ್ಪಂದದ ಸ್ವರೂಪ ಏನು ಎಂಬುದನ್ನು ಹೈಕಮಾಂಡ್ ಸ್ಪಷ್ಟಪಡಿಸಬೇಕು. ಈ ಮೂಲಕ ಹೈಕಮಾಂಡ್ ಸದ್ಯ ಇರುವ ಗೊಂದಲವನ್ನು ಬಗೆಹರಿಸಬೇಕು. ಇದನ್ನು ನಾವಷ್ಟೇ ಅಲ್ಲ, ಎಲ್ಲರೂ ಹೇಳುತ್ತಿದ್ದಾರೆ ಎಂದು ಉತ್ತರಿಸಿದರು.

ಸಿದ್ದರಾಮಯ್ಯ ಅವರು ಪ್ರಸ್ತುತ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಅವರಿಗೂ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎನ್ನುವುದು ನಮ್ಮ ಆಸೆ. ಹೈಕಮಾಂಡ್ ಏನೇ ನಿರ್ಧಾರ ತಗೊಂಡರೂ ನಾವು ಅದಕ್ಕೆ ಬದ್ಧರಾಗಿರುತ್ತೇವೆ. ವರಿಷ್ಠರು ಸೂಕ್ತ ನಿರ್ಧಾರ ತಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲದಕ್ಕೂ ಕಾಲ ಬರಬೇಕು, ಕಾಲಾಯ ತಸ್ಮೈ ನಮಃ ಎಂದು ಅವರು ಮಾರ್ಮಿಕವಾಗಿ ನುಡಿದರು.

ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ತಾನು ಹೆಚ್ಚಾಗಿ ಮಾತನಾಡುವುದಿಲ್ಲ ಎಂದ ರಂಗನಾಥ್, ಸಂಪುಟ ಪುನಾರಚನೆಯಾಗಬೇಕು ಎಂಬ ಬೇಡಿಕೆ ಕೆಲವರಿಂದ ಕೇಳಿಬರುತ್ತಿದೆ. ಈಗಾಗಲೇ ಒಂದು ತಂಡ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಬಂದಿದೆ. ಇನ್ನೊಂದು ತಂಡವೂ ದೆಹಲಿಗೆ ಹೋಗುವ ಸಾಧ್ಯತೆಯಿದೆ ಎಂದು ಸಂಪುಟ ಬದಲಾವಣೆಯ ಸೂಚನೆ ನೀಡಿದರು.

ಮಾಜಿ ಸಚಿವ ಡಿ. ಸುಧಾಕರ್ ಅವರ ಅನಾರೋಗ್ಯದ ವಿಚಾರದಲ್ಲಿ ಸರ್ಕಾರ ಮಾಹಿತಿ ಮುಚ್ಚಿಡುತ್ತಿದೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪವನ್ನು ಶಾಸಕ ರಂಗನಾಥ್ ತಳ್ಳಿಹಾಕಿದರು. ಪೋಲಿಯೋದಿಂದಾಗಿ ಸುಧಾಕರ್ ಅವರ ಬಲಗಾಲಿಗೆ ಒತ್ತಡ ಜಾಸ್ತಿಯಾಗಿ ಸಮಸ್ಯೆ ಉಂಟಾಗಿತ್ತು. ಮಂಡಿ ಚಿಪ್ಪು ಬದಲಾವಣೆ ಸರ್ಜರಿ ಮಾಡಬೇಕಿತ್ತು. ಅಷ್ಟರಲ್ಲಿ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾದರು. ಪ್ರಸ್ತುತ ಹಂತದಲ್ಲಿ ಶ್ವಾಸಕೋಶ ಕಸಿ ಮಾಡುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವಿವರಿಸಿದರು.

ಆರೋಗ್ಯದ ವಿಚಾರದಲ್ಲಿ ಏನನ್ನೂ ಮುಚ್ಚಿಡುವ ಅವಶ್ಯಕತೆ ಸರ್ಕಾರಕ್ಕಿಲ್ಲ. ಸುಧಾಕರ್ ಅವರ ಆರೋಗ್ಯದ ಬಗ್ಗೆ ಹೊರಗಡೆ ಮಾಹಿತಿ ನೀಡಬೇಕಾದರೆ, ಮೊದಲು ಅವರ ಕುಟುಂಬ ನಿರ್ಧಾರ ಮಾಡುತ್ತದೆ. ಬಳಿಕ ಆಸ್ಪತ್ರೆ ಮತ್ತು ಸರ್ಕಾರ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತದೆ. ಮಾಹಿತಿ ಹಂಚಿಕೊಳ್ಳಲು ಒಂದಷ್ಟು ನಿಯಮಾವಳಿಗಳಿವೆ. ಅದರಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದರು.