ಮನೆ ಸುದ್ದಿ ಜಾಲ IPL 2026 : ರಘುವಂಶಿಗೆ 4.28 ಲಕ್ಷರೂ. ದಂಡ!

IPL 2026 : ರಘುವಂಶಿಗೆ 4.28 ಲಕ್ಷರೂ. ದಂಡ!

0

ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಉದಯೋನ್ಮುಖ ಬ್ಯಾಟರ್  ರಘುವಂಶಿ ಅವರಿಗೆ IPL ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಸಂಭಾವನೆಯಲ್ಲಿ ಶೇ. 20 ರಷ್ಟು ದಂಡ ವಿಧಿಸಲಾಗಿದೆ. ಜೊತೆಗೆ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ.

ಏಪ್ರಿಲ್ 26 ರಂದು ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ನಡೆದ ಪಂದ್ಯದಲ್ಲಿ ಅಂಗ್​ಕ್ರಿಶ್ ರಘುವಂಶಿ ಅವರು ‘ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ’ ಕಾರಣಕ್ಕಾಗಿ ಔಟ್ ಎಂದು ಘೋಷಿಸಲಾಯಿತು. ಈ  ತೀರ್ಪಿನಿಂದ ತೀವ್ರ ಅಸಮಾಧಾನಗೊಂಡ ರಘುವಂಶಿ, ಮೈದಾನದಿಂದ ಹೊರಹೋಗುವ  ಸಮಯದಲ್ಲಿ , ಬೌಂಡರಿ ಲೈನ್‌ನಲ್ಲಿದ್ದ ಕುಶನ್‌ಗಳನ್ನು ಬ್ಯಾಟ್‌ನಿಂದ ಜೋರಾಗಿ ಹೊಡೆದರು. ಅಷ್ಟೇ ಅಲ್ಲದೆ, ಡಗೌಟ್ ತಲುಪಿದ ನಂತರ  ಕೋಪದಲ್ಲಿ ತಮ್ಮ ಹೆಲ್ಮೆಟ್ ಅನ್ನು ಜೋರಾಗಿ  ಎಸೆದಿದ್ದರು.

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ (ಕ್ರಿಕೆಟ್ ಉಪಕರಣಗಳು ಅಥವಾ ಮೈದಾನದ ವಸ್ತುಗಳ ದುರ್ಬಳಕೆ) ರಘುವಂಶಿ ಅವರ ಈ ವರ್ತನೆಯನ್ನು ‘ಲೆವೆಲ್ 1’ ಅಪರಾಧ ಎಂದು ಪರಿಗಣಿಸಲಾಗಿದೆ. ನಂತರ  ರಘುವಂಶಿ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಅಂಗೀಕರಿಸಿದ್ದಾರೆ.

ಅಂಗ್​ಕ್ರಿಶ್ ರಘುವಂಶಿ ಅವರಿಗೆ ಕೆಕೆಆರ್ 3 ಕೋಟಿ ರೂ. ಸಂಭಾವನೆ ನೀಡುತ್ತಿದೆ. ಅದರಂತೆ ಲೀಗ್​ ಹಂತದ ಪ್ರತಿ ಪಂದ್ಯಕ್ಕೆ ಅವರ ಪಡೆಯುತ್ತಿರುವ ಶುಲ್ಕ 21,42857. ಈ  ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ಕಟ್ಟಬೇಕಾಗುತ್ತದೆ. ಅಂದರೆ ಅಂಗ್​ಕ್ರಿಶ್ ರಘುವಂಶಿ ಅವರು  4.28 ಲಕ್ಷ ರೂ. ದಂಡ ಪಾವತಿಸಬೇಕು.

ಈ ಪಂದ್ಯದ 5ನೇ ಓವರ್‌ನಲ್ಲಿ ರನ್ ಓಡುವಾಗ ರಘುವಂಶಿ ಅವರು ತಮ್ಮ ದಿಕ್ಕನ್ನು ಬದಲಿಸಿ ಫೀಲ್ಡರ್ ಎಸೆದ ಚೆಂಡಿಗೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಲಕ್ನೋ ತಂಡ ಅಪೀಲ್ ಮಾಡಿತ್ತು. ಅಂಪೈರ್ ಇದನ್ನು ಪರಿಶೀಲಿಸಿ ‘ಔಟ್’ ಎಂದು ತೀರ್ಪು ನೀಡಿದ್ದರು. ಐಪಿಎಲ್ ಇತಿಹಾಸದಲ್ಲಿ ‘ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ’ ಕಾರಣಕ್ಕೆ ಔಟ್ ಆದ ನಾಲ್ಕನೇ ಆಟಗಾರ ಎಂಬ ಕುಖ್ಯಾತಿಗೆ ರಘುವಂಶಿ ಪಾತ್ರರಾಗಿದ್ದಾರೆ .