ಆಮ್ ಆದ್ಮಿ ಪಕ್ಷದ (AAP) ಒಳಗಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ದೇಶದ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. ಪಕ್ಷದ ಪ್ರಮುಖ ರಾಜ್ಯಸಭಾ ಸದಸ್ಯರು ಕ್ರಮೇಣ ಬಿಜೆಪಿ ಸೇರುತ್ತಿರುವುದು ಎಎಪಿಗೆ ಗಂಭೀರ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ರಾಘವ್ ಚಡ್ಡಾ ಬಿಜೆಪಿ ಸೇರ್ಪಡೆಯಾದ ನಂತರ, ಇನ್ನಷ್ಟು ನಾಯಕರು ಪಕ್ಷ ತೊರೆಯುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಜೋರಾಗಿವೆ.
ಇತ್ತೀಚಿನ ಮಾಹಿತಿ ಪ್ರಕಾರ, ಎಎಪಿ ಪಕ್ಷದ 10 ರಾಜ್ಯಸಭಾ ಸದಸ್ಯರಲ್ಲಿ 7 ಮಂದಿ ಈಗಾಗಲೇ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಪ್ರಮುಖ ಮುಖಂಡರ ನಿರ್ಗಮನವು ಪಕ್ಷದೊಳಗೆ ಗೊಂದಲ, ಆತಂಕ ಮತ್ತು ಅಸ್ಥಿರತೆಯನ್ನು ಉಂಟುಮಾಡಿದೆ. ಪಕ್ಷದ ಭವಿಷ್ಯದ ಬಗ್ಗೆ ಅನುಮಾನಗಳು ಹೆಚ್ಚಾಗಿದ್ದು, ನಾಯಕತ್ವದ ಮೇಲೂ ಒತ್ತಡ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ, ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಕೂಡ ಬಿಜೆಪಿ ಸೇರುತ್ತಾರೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬಂದಿತು. ಈ ಬಗ್ಗೆ ಯೂಟ್ಯೂಬ್ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಅವರು ತಮ್ಮ ನಿಲುವನ್ನು ಬಹಳ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.
“ನಾನು ಸಾಯುವವರೆಗೂ ಬಿಜೆಪಿ ಸೇರುವುದಿಲ್ಲ ಎಂದು ಸಂಜಯ್ ಸಿಂಗ್ ಖಡಕ್ ಘೋಷಣೆ ಮಾಡಿದ್ದಾರೆ. ಬಿಜೆಪಿ ಕಡೆಯಿಂದ ಯಾವುದೇ ಆಫರ್ ಬಂದಿದೆಯೇ ಎಂಬ ಪ್ರಶ್ನೆಗೆ ಅವರು, “ನನ್ನನ್ನು ಜೈಲಿಗೆ ಕಳುಹಿಸಿದ ಪಕ್ಷವೇ ನನಗೆ ಹೇಗೆ ಆಫರ್ ಕೊಡುತ್ತದೆ? ಅವರು ನನ್ನನ್ನು ತಮ್ಮ ಕಡೆಗೆ ಸೆಳೆಯಲು ಯಾವುದೇ ಪ್ರಯತ್ನ ಮಾಡಿಲ್ಲ. ನಾನು ಸುಳ್ಳು ಹೇಳುವುದಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ರಾಘವ್ ಚಡ್ಡಾ ಬಗ್ಗೆ ಕೇಳಿದಾಗ, ಅವರ ಕುರಿತು ಮಾತನಾಡಲು ನಿರಾಕರಿಸಿದರು. ಆದರೆ ತಮ್ಮ ಬಗ್ಗೆ ಯಾವುದೇ ಅನುಮಾನ ಇರಬಾರದು ಎಂದು ಸ್ಪಷ್ಟಪಡಿಸಿದ್ದಾರೆ. “ನನ್ನ ವಿಷಯದಲ್ಲಿ ಯಾರಿಗೂ ಖಾತರಿ ಬೇಕಾಗಿಲ್ಲ, ನಾನು ಸ್ವತಃ ಖಾತರಿ ನೀಡುತ್ತೇನೆ” ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಂಜಯ್ ಸಿಂಗ್ ಅವರು RSS ಹಾಗೂ ಬಿಜೆಪಿ ಸಿದ್ಧಾಂತಗಳನ್ನೂ ಟೀಕಿಸಿದ್ದಾರೆ. “RSS ಸಿದ್ಧಾಂತ ನನಗೆ ಒಪ್ಪುವುದಿಲ್ಲ. ಅಂತಹ ಸಿದ್ಧಾಂತ ಹೊಂದಿರುವ ಪಕ್ಷಕ್ಕೆ ಸೇರುವ ಪ್ರಶ್ನೆಯೇ ಇಲ್ಲ”ಎಂದು ಅವರು ಹೇಳಿದರು. ಅವರ ಈ ಹೇಳಿಕೆ ಪಕ್ಷದ ಬೆಂಬಲಿಗರಿಗೆ ಕೆಲವು ಮಟ್ಟಿನ ಆತ್ಮಸ್ಥೈರ್ಯವನ್ನು ನೀಡಿದಂತಾಗಿದೆ.
ಇದ ರ ಜೊತೆಗೆ, ಪಂಜಾಬ್ ಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಭಗವಂತ್ ಮಾನ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಬಿಜೆಪಿ ಸೇರ್ಪಡೆಯಾದ ಎಎಪಿ ರಾಜ್ಯಸಭಾ ಸದಸ್ಯರ ವಿಚಾರವನ್ನು ರಾಷ್ಟ್ರಪತಿಗಳ ಗಮನಕ್ಕೆ ತರಲು ಅವರು ಮುಂದಾಗಿದ್ದಾರೆ. ಮೇ 5ರಂದು ಮಧ್ಯಾಹ್ನ 12 ಗಂಟೆಗೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ಸಮಯ ಪಡೆದಿದ್ದಾರೆ.
ಈ ಭೇಟಿಯಲ್ಲಿ, ಬಿಜೆಪಿ ಸೇರ್ಪಡೆಯಾದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಥವಾ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಮನವಿ ಮಾಡುವ ಸಾಧ್ಯತೆ ಇದೆ. ಇದಕ್ಕೂ ಮುನ್ನವೇ ಭಗವಂತ್ ಮಾನ್ ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದು ಈ ವಿಷಯದ ಬಗ್ಗೆ ಚರ್ಚಿಸಲು ಅವಕಾಶ ಕೇಳಿದ್ದರು.
ಆಮ್ ಆದ್ಮಿ ಪಕ್ಷವು ಸದ್ಯ ಗಂಭೀರ ರಾಜಕೀಯ ಸಂಕಷ್ಟವನ್ನು ಎದುರಿಸುತ್ತಿದೆ. ಒಂದೆಡೆ ಪ್ರಮುಖ ನಾಯಕರು ಪಕ್ಷ ತೊರೆದು ಹೋಗುತ್ತಿರುವಾಗ, ಮತ್ತೊಂದೆಡೆ ಸಂಜಯ್ ಸಿಂಗ್ ಅವರಂತಹ ನಾಯಕರು ತಮ್ಮ ನಿಲುವಿನಲ್ಲಿ ದೃಢವಾಗಿ ನಿಂತಿದ್ದಾರೆ. ಇದೇ ಸಮಯದಲ್ಲಿ ಭಗವಂತ್ ಮಾನ್ ಸಂವಿಧಾನಾತ್ಮಕ ಮಾರ್ಗದ ಮೂಲಕ ಹೋರಾಟ ಮುಂದುವರಿಸಲು ಸಿದ್ಧರಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆಗಳು ಯಾವ ದಿಕ್ಕಿಗೆ ತಿರುಗುತ್ತವೆ ಎಂಬುದು ಕಾದು ನೋಡುವಂತಾಗಿದೆ.















