ಬೀಜಿಂಗ್ : ಚೀನಾದ ಹುನಾನ್ ಪ್ರಾಂತ್ಯದ ಲಿಯುಯಾಂಗ್ ನಗರದಲ್ಲಿರುವ ಪಟಾಕಿ ಉತ್ಪಾದನಾ ಘಟಕದಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, 21 ಮಂದಿ ದಾರುಣ ಸಾವಿಗೀಡಾಗಿದ್ದಾರೆ. ಹುನಾನ್ ಪ್ರಾಂತ್ಯದ ಲಿಯುಯಾಂಗ್ ನಗರದಲ್ಲಿ ಸೋಮವಾರ (ಮೇ 4) ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಈ ದುರಂತದಲ್ಲಿ 21 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 61 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ತನಿಖೆಗೆ ಆದೇಶಿಸಿದ್ದಾರೆ. ಮತ್ತೊಂದು ಕಡೆ ಯುಎಇಯ ತೈಲ ಸಂಗ್ರಹಣಾ ಕೇಂದ್ರದ ಮೇಲೆ ನಡೆದ ಡ್ರೋನ್ ದಾಳಿಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಮೂವರು ಭಾರತೀಯರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಫುಜೈರಾ ಪೆಟ್ರೋಲಿಯಂ ಇಂಡಸ್ಟ್ರೀಸ್ ವಲಯದಲ್ಲಿ ಘಟನೆ ನಡೆದಿದ್ದು, ಮೂವರು ಭಾರತೀಯ ನಾಗರಿಕರು ಗಾಯಗೊಂಡಿದ್ದಾರೆ. ಇರಾನ್‌ನಿಂದ ಬಂದ ಡ್ರೋನ್ ದಾಳಿಯಿಂದ ಈ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಮೂವರು ಭಾರತೀಯರಿಗೆ ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

















