ಮನೆ ಸುದ್ದಿ ಜಾಲ 2,500 ವರ್ಷಗಳ ಹಿಂದಿನ ಪುರಾತನ ಶವಗುಣಿ ನಿಲುಸುಗಲ್ಲು ಪತ್ತೆ

2,500 ವರ್ಷಗಳ ಹಿಂದಿನ ಪುರಾತನ ಶವಗುಣಿ ನಿಲುಸುಗಲ್ಲು ಪತ್ತೆ

0

ಗಂಗಾವತಿ ತಾಲೂಕಿನ ಆಗೋಲಿ ಸಮೀಪದ ಬೆಟ್ಟ ಪರಿಸರದಲ್ಲಿ ಸುಮಾರು 2,500 ವರ್ಷಗಳ ಹಿಂದಿನ ಬೃಹತ್ ಶಿಲಾಯುಗದ ಶವಗುಣಿ ನಿಲುಸುಗಲ್ಲು (ಸಮಾಧಿ ಮೇಲೆ ನಿಲ್ಲಿಸುವ ನಿಲುವುಗಲ್ಲು- ಮೆನ್ಹಿರ್) ಪತ್ತೆಯಾಗಿದ್ದು, ಹಿರಿಯ ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೊಲ್ಕಾರ್ ಅವರ ನೇತೃತ್ವದ ತಂಡ ಸಂಶೋಧನೆ ಮಾಡಿದೆ. ಅಪರೂಪದ ಪುರಾತನ ಸ್ಮಾರಕದ ಪತ್ತೆಯಿಂದಾಗಿ ಈ ಪ್ರದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ನಡೆಯುತ್ತಿದ್ದ ಆದಿಮ ಬುಡಕಟ್ಟುಗಳ ಶವಸಂಸ್ಕಾರ ಪದ್ಧತಿಗೆ ಮಹತ್ವದ ಕೊಂಡಿ ಒದಗಿಸಿದೆ. ಗಡ್ಡಿ-ಆಗೋಲಿ ರಸ್ತೆಯ ಬಲಬದಿಗೆ ಬೂದಿಗುಡ್ಡದ ಬುಡದಲ್ಲಿ ಈ 4 ಅಡಿ ಎತ್ತರ, 1 ಅಡಿ ಅಗಲದ ನಿಲುಸುಗಲ್ಲನ್ನು ಸ್ಥಾಪಿಸಲಾಗಿದೆ ಎನ್ನಲಾಗಿದೆ.

ಈ ಕಲ್ಲು ನೈಸರ್ಗಿಕ ಶಿಲಾ ಚಪ್ಪಡಿಯಾಗಿದ್ದು ಸಮಪ್ರಮಾಣದಲ್ಲಿಲ್ಲದೆ ಅಂಕುಡೊಂಕಾಗಿದೆ. ಮೂಲತಃ ಈ ನಿಲುಸುಗಲ್ಲಿನ ಸುತ್ತಲೂ ಶಿಲಾವೃತ್ತ ಇತ್ತು. ಆದರೆ, ಈಗ ಕಾಲಗರ್ಭದಲ್ಲಿ ಹಾಳಾಗಿದೆ. ಪುರಾತತ್ವ ಶಾಸ್ತ್ರಜ್ಞರು ಇದನ್ನು ಶಿಲಾವೃತ್ತದೊಳಗಿನ ನಿಲುಸುಗಲ್ಲು (ಮೆನ್ಹಿರ್ ವಿತ್ ಸ್ಟೋನ್ ಸರ್ಕಲ್) ಎಂದು ಕರೆಯುತ್ತಾರೆ. ಶವವನ್ನು ಹೂಳಿದ ಬಳಿಕ ನಿರ್ಮಾಣ ಮಾಡುವ ಸಮಾಧಿ ಮೇಲೆ ಈ ನಿಲುವುಗಲ್ಲನ್ನು ನಿಲ್ಲಿಸುತ್ತಿದ್ದರು. ಪ್ರತಿ ವರ್ಷದಲ್ಲಿ ಬರುವ ಅಮಾವಾಸ್ಯೆ, ಹಬ್ಬ-ಹರಿದಿನಗಳಂತಹ ವಿಶೇಷ ದಿನಗಳಲ್ಲಿ ಇಂತಹ ಕಲ್ಲುಗಳಿಗೆ ಜನ ಪೂಜೆ ಸಲ್ಲಿಸಿ ಆಹಾರ ನೀಡುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ. ಇಂದಿಗೂ ಸಾವಿರಾರು ವರ್ಷದ ಬುಡಕಟ್ಟು ಸಂಪ್ರದಾಯ ಅಸ್ತಿತ್ವದಲ್ಲಿದೆ ಎನ್ನಬುಹುದು. ಇದೊಂದು ಪದ್ಧತಿ: ಕಬ್ಬಿಣ ಯುಗ – ಬೃಹತ್ ಶಿಲಾಯುಗಕ್ಕೆ ಸೇರಿದ ಈ ಪ್ರದೇಶದ ಬುಡಕಟ್ಟು ಜನರು ಸತ್ತವರಿಗಾಗಿ ಹಲವು ರೀತಿಯ ಸಮಾಧಿಗಳನ್ನು ನಿರ್ಮಿಸುತ್ತಿದ್ದರು ಎನ್ನಲಾಗಿದೆ.

ಅದರಲ್ಲಿ ಶವಗುಣಿಯ ಮೇಲೆ ಎತ್ತರವಾದ ನೈಸರ್ಗಿಕ ಶಿಲೆಯನ್ನು ನೆಟ್ಟು, ಸುತ್ತಲೂ ತುಂಡುಕಲ್ಲುಗಳಿಂದ ವೃತ್ತ ರಚಿಸುವುದು ಒಂದು ವಿಶೇಷ ಪದ್ಧತಿ. ಹಿರೇಬೆಣಕಲ್, ಮೊರೇರ್ ಗುಡ್ಡದಂತೆ ಸಮಾಧಿಗಳು ಗುಂಪಾಗಿ ಕಂಡುಬಂದರೂ, ಆಗೋಲಿಯ ಈ ನಿಲುಸುಗಲ್ಲಿನಂತೆ ಅಲ್ಲಲ್ಲಿ ಒಂಟಿಯಾಗಿ ಕಂಡುಬರುವುದು ಅಪರೂಪ. ಇಂದಿಗೂ ಇಲ್ಲಿ ಪೂಜೆ ಸಲ್ಲಿಸುತ್ತಿರುವುದು ವಿಶೇಷ ಎನ್ನುತ್ತಾರೆ ಡಾ.ಕೊಲ್ಕಾರ್. ಆಕಸ್ಮಿಕ ಸಾವಿನ ಸ್ಮಾರಕ: ಈ ಬುಡಕಟ್ಟು ಜನರು ಸಾಮಾನ್ಯವಾಗಿ ಸತ್ತವರನ್ನು ನಿರ್ದಿಷ್ಟ ಸ್ಮಶಾನದಲ್ಲಿ ಹೂತು ಸಮಾಧಿ ಕಟ್ಟುತ್ತಿದ್ದರು. ಆದರೆ, ಬೇಟೆಗಾಗಿ ಅಥವಾ ಇತರ ಕಾರಣಕ್ಕೆ ದೂರ ಹೋದಾಗ ಯಾರಾದರೂ ಆಕಸ್ಮಿಕವಾಗಿ ಮರಣ ಹೊಂದಿದರೆ, ಶವವನ್ನು ಊರಿಗೆ ಒಯ್ಯುತ್ತಿರಲಿಲ್ಲ. ಬದಲಿಗೆ ಅಲ್ಲಿಯೇ ಹೂತು ಕೆಲದಿನಗಳ ನಂತರ ಬಂದು ಬೆಟ್ಟದಿಂದ ಚಪ್ಪಡಿಕಲ್ಲು ತಂದು ಶವಗುಣಿಯ ಮೇಲೆ ನೆಡುತ್ತಿದ್ದರು. ಕೆಲವೊಮ್ಮೆ ಸುತ್ತಲೂ ಕಲ್ಲಿನ ವೃತ್ತವನ್ನೂ ಜೋಡಿಸುತ್ತಿದ್ದರು. ಕೊಲ್ಕಾರ್  ಆಗೋಲಿಯ ಈ ನಿಲುಸುಗಲ್ಲು ಹಾಗೇ ನಿರ್ಮಿಸಿದ ಒಂದು ಸಮಾಧಿ ಎನ್ನುತ್ತಾರೆ.

ಹಾಗೂ ಈ ನಿಲುಸುಗಲ್ಲುಗಳೇ ಮುಂದೆ ಕಲ್ಗೊಂಬೆ ಆಕಾರ ಪಡೆದುಕೊಂಡಿರುವ ಸಾಧ್ಯತೆ ಅಧಿಕವಾಗಿದೆ. ವಿಶ್ವದ ನಾನಾ ಕಡೆಗಳಲ್ಲಿ ಇಂತಹ ರೂಪಗಳು ಕಂಡುಬರುತ್ತಿದ್ದು, ಅಲ್ಲಿನ ಸ್ಥಳೀಯ ಪ್ರದೇಶ, ಆಸಕ್ತಿ, ಹವಾಗುಣಕ್ಕೆ ಅನುಗುಣವಾಗಿ ಮಾರ್ಪಾಡಾಗಿರುವ ಸಾಧ್ಯತೆ ಇದೆ. ಈ ಶೋಧನೆಯಿಂದ ಗಂಗಾವತಿ ಪ್ರದೇಶದ ಆದಿಮ ಬುಡಕಟ್ಟುಗಳ ಚಲನವಲನ ಮತ್ತು ಶವಸಂಸ್ಕಾರ ಪದ್ಧತಿಯನ್ನು ಅರಿಯಲು ಸಹಾಯವಾಗಿದೆ. ಪ್ರದೇಶದ ಇತಿಹಾಸಕ್ಕೆ ಹೊಸ ಬೆಳಕು ಚೆಲ್ಲುವ ಈ ಶೋಧನೆ, ಶೋಧಕ ತಂಡದ ಸದಸ್ಯ ಹರನಾಯಕ  ಅವರು  ಈ ಬೃಹತ್ ಶಿಲಾಯುಗದ ಸಂಸ್ಕೃತಿಯನ್ನು ಅಧ್ಯಯನ ಮಾಡುವ ಸಂಶೋಧಕರಿಗೆ ಮಹತ್ವದ ಆಕರ ಎನ್ನುತ್ತಾರೆ.