ಮಂಡ್ಯ : ನನ್ನ ರಾಜಕೀಯ ಪ್ರವೇಶ ಮಂಡ್ಯ ಜಿಲ್ಲೆಯಿಂದಲೇ ಆಗಿದೆ. ನಾವು ಮಂಡ್ಯದಲ್ಲಿ ಹುಟ್ಟದಿದ್ದರೂ ಈ ಜಿಲ್ಲೆಯ ಋಣ ನಮ್ಮ ಮೇಲಿದೆ. ಯಾವುದೇ ಊರಿಗೆ ಹೋದರೂ ಜನ ತೋರಿಸುವ ಪ್ರೀತಿ ಮರೆಯಲಾಗದು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರದಲ್ಲಿ ನಡೆದ ಜನರೊಂದಿಗೆ ಜನತಾದಳ ಮತ್ತು ಪಕ್ಷದ 25ನೇ ವರ್ಷದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆಯ ಸೋಲು ರಾಜಕೀಯ ಪಕ್ವತೆಗೆ ದಾರಿ ಮಾಡಿಕೊಟ್ಟಿದೆ. ಅವತ್ತಿನ ನಿಖಿಲ್ಗೂ ಇವತ್ತಿನ ನಿಖಿಲ್ಗೂ ಸಾಕಷ್ಟು ಬದಲಾವಣೆಯಾಗಿದೆ ಎಂದರು.
ದೇವೇಗೌಡರ ಹೋರಾಟದ ಫಲವೇ ಜನತಾದಳ ಪಕ್ಷ. 25 ವರ್ಷಗಳ ರಜತ ಮಹೋತ್ಸವ ಆಚರಿಸುತ್ತಿರುವ ನಮ್ಮ ಜೆಡಿಎಸ್ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಗಾಗಿ ಹೋರಾಡಿದ ಪಕ್ಷ. ಎಷ್ಟೋ ಪ್ರಾದೇಶಿಕ ಪಕ್ಷಗಳು ಹುಟ್ಟಿ ಮುಳುಗಿದರೂ, ಗಟ್ಟಿಯಾಗಿ ಉಳಿದು ರಾಜ್ಯದಲ್ಲಿ ಸುಭದ್ರವಾಗಿರುವುದು ಜೆಡಿಎಸ್ ಮಾತ್ರ ಎಂದು ಪ್ರತಿಪಾದಿಸಿದರು. 93ನೇ ವಯಸ್ಸಿನಲ್ಲೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೋರಾಟದ ಕಿಚ್ಚು ಕಡಿಮೆಯಾಗಿಲ್ಲ.
ರಾಜ್ಯಸಭೆಯಲ್ಲಿ ಕನ್ನಡ ನಾಡಿನ ರೈತರು, ನೀರಾವರಿ ಪರವಾಗಿ ಅವರು ಧ್ವನಿ ಎತ್ತುತ್ತಿದ್ದಾರೆ. ಅವರ ಹೋರಾಟದ ಮನೋಭಾವ ನಮಗೆಲ್ಲರಿಗೂ ಸ್ಫೂರ್ತಿ ಎಂದು ಬಣ್ಣಿಸಿದರು. ರೈತರ ಬದುಕು ಹಸನಾಗಿಸುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರ್ಕಾರದ ಆಡಳಿತದಲ್ಲಿ ಇಂದು ಅನ್ನದಾತನ ಬದುಕೇ ಹಾಳಾಗುತ್ತಿದೆ. ಸಾಲದ ಸುಳಿಗೆ ಸಿಲುಕಿ, ಬೆಂಬಲ ಬೆಲೆಯಿಲ್ಲದೆ, ನೆಮ್ಮದಿಯಿಂದ ಬದುಕಲೂ ಆಗದ ಸ್ಥಿತಿಗೆ ರೈತ ತಲುಪಿದ್ದಾನೆ. ಕಾಂಗ್ರೆಸ್ ಆಡಳಿತದಲ್ಲಿ ಕಳೆದ ಮೂರು ವರ್ಷಗಳಲ್ಲಿ 3 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯ ಜಿಲ್ಲೆಯೊಂದರಲ್ಲೇ 97 ರೈತರು ಬಲಿಯಾಗಿದ್ದಾರೆ. ಇದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ಆರೋಪಿಸಿದರು.

















