ಮೈಸೂರು : ಅಗ್ರಹಾರದ ಉತ್ತರ ಭಾಗದ ವಾಣಿವಿಲಾಸ ಮಾರುಕಟ್ಟೆಯ ಮಳಿಗೆಗಳ ಸಜ್ಜಾ ಕುಸಿತಕ್ಕೆ ಇದೇ ಮೇ 12ಕ್ಕೆ 4 ವರ್ಷವಾಗುತ್ತದೆ. ಇಂದಿಗೂ ಯಾವುದೇ ಬದಲಾವಣೆ, ದುರಸ್ತಿ ಆಗಿಲ್ಲ. ಶಿಥಿಲಾವಸ್ಥೆ ತಲುಪಿರುವ ಕಟ್ಟಡವೀಗ ಲ್ಯಾನ್ಸ್‌ಡೌನ್ ಕಟ್ಟಡದ ಹಾದಿಯಲ್ಲಿದೆ ಎನ್ನಬಹುದು.
2015ರಲ್ಲಿಯೇ ಕಾಯಕಲ್ಪಕ್ಕೆ ₹ 35 ಕೋಟಿ ಪ್ರಸ್ತಾವವನ್ನು ಪಾಲಿಕೆಯು ಸರ್ಕಾರಕ್ಕೆ ಸಲ್ಲಿಸಿತ್ತು. ಅಲ್ಲಿಂದಲೂ ಬಿಡಿಗಾಸು ಕೂಡ ಬಿಡುಗಡೆ ಆಗಿಲ್ಲ. ಮಾರುಕಟ್ಟೆಯ ಒಳ ಪ್ರವೇಶಿಸಿದರೆ ಅವ್ಯವಸ್ಥೆಯ ದರ್ಶನವಾಗುತ್ತದೆ. ಗೋಡೆಯ ತಳದಲ್ಲಿ ಇಲಿಗಳು ಬಿಲ ಮಾಡಿವೆ. ಮರದ ಬೇರುಗಳಿಂದ ಮೇಲೆದ್ದ ಚಪ್ಪಡಿಗಳು, ಚರಂಡಿ ದುರಸ್ತಿಯಾಗದೇ ಅರ್ಧ ಅಡಿಯಷ್ಟು ಕುಸಿದಿರುವ ನೆಲಹಾಸಿನ ಕಲ್ಲುಗಳು ಗ್ರಾಹಕರಿಗೆ “ಎಡವಬೇಡಿ ನೋಡಿಕೊಂಡು ಕಾಲಿಡಿ’ ಎಂದರೆ, ಮಾಡಿನ ಸಜ್ಜಾಗಳು, ‘ಬೇಗ ಜಾಗ ಖಾಲಿ ಮಾಡಿ’ ಎನ್ನುತ್ತಿರುವಂತೆ ಭಾಸವಾಗುತ್ತದೆ. ಗೋಡೆಗಳು ಬಿರುಕು ಮೂಡಿದ್ದರೆ, ಪ್ರತಿ ಮಳಿಗೆಯ ಮೇಲಿರುವ ಗೋಪುರಗಳು ಬೀಳುತ್ತಿವೆ ಎನ್ನಲಾಗುತ್ತಿದೆ.
ಹೀಗೆ ಪ್ರತಿ ವರ್ಷವೂ ಮಳಿಗೆಗಳ ಸೂರು ಕಳಚುತ್ತಿದೆ. ಪ್ರವೇಶದ್ವಾರ ಬೀಳುವ ಹಂತದಲ್ಲಿದ್ದರಿಂದ ಎರಡು ಕಡೆ ಮುಚ್ಚಿ ದಶಕವಾಗಿದೆ. 2022ರಲ್ಲಿ ಸಜ್ಜಾ ಕುಸಿದಿತ್ತು. ಅಪಾಯದಿಂದ ಮೂವರು ಪಾರಾಗಿದ್ದರು. ಬಾಡಿಗೆದಾರರು ಜೀವ ಬ್ಯಾಯದಲ್ಲಿಯೇ ವ್ಯಾಪಾರ ನಡೆಸಬೇಕಿದೆ. ಹೆಂಚು, ಟಾರ್ಪಲ್ ಬಳಸಿಕೊಂಡು ಮಳೆ-ಬಿಸಿಲಿನಲ್ಲೇ ವಹಿವಾಟು ಮಾಡುತ್ತಿದ್ದಾರೆ. ಅಲ್ಲಿ ನೂರಾರು ಮಳಿಗೆಗಳಿದ್ದು, ಅವುಗಳಲ್ಲಿ ಕೆಲವು ಶಿಥಿಲವಾದ್ದರಿಂದ ಮುಚ್ಚಲಾಗಿದೆ. ದುರಸ್ತಿ ಮಾಡಬೇಕು’ ಎಂದು ಅಲ್ಲಿನ ವ್ಯಾಪಾರಿಗಳು ಹೇಳಿದ್ದಾರೆ ಎನ್ನಬಹುದು.

















