ಮಧ್ಯಪ್ರದೇಶ : ಪ್ರೀತಿಗೆ ಕಣ್ಣಿಲ್ಲ. ಪ್ರೀತಿಗೆ ಕಾರಣ ಬೇಕಿಲ್ಲ.. ಅದು ನೋಡುವುದು ಮನಸ್ಸನ್ನು ಮಾತ್ರ ಎಂಬ ಮಾತಿನಂತೆ ಅನೇಕ ಅಪರೂಪದ ಮದುವೆಗಳನ್ನು ನಾವು ಕೇಳಿರುತ್ತೇವೆ. ದೇಶದ ಗಡಿ, ವಯಸ್ಸು, ಆಸ್ತಿ- ಅಂತಸ್ತನ್ನು ಮೀರಿ ಮದುವೆಯಾದವರು ನಮ್ಮ ನಡುವಿದ್ದಾರೆ. ಆದರೆ, ಮಧ್ಯಪ್ರದೇಶದ ಈ ಪ್ರೀತಿ ಅದೆಲ್ಲಕ್ಕಿಂತ ಹೊರತಾಗಿದೆ. ಇಲ್ಲಿ ಮದುವೆಯಾಗಿರುವ ಜೋಡಿ ಸತ್ನಾ ಸೆಂಟ್ರಲ್ ಜೈಲ್ನ ಸಹಾಯಕ ಜೈಲು ಉಪ ಅಧೀಕ್ಷಕಿ ಮತ್ತು ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಪೂರ್ಣಗೊಳಿಸಿರುವ ವ್ಯಕ್ತಿ.
ಸತ್ನಾ ಕೇಂದ್ರ ಕಾರಾಗೃಹದ ಸಹಾಯಕ ಜೈಲು ಅಧೀಕ್ಷಕರಾಗಿರುವ ಫಿರೋಜಾ ಖಾತೂನ್ ಮತ್ತು ಕೊಲೆ ಪ್ರಕರಣದಲ್ಲಿ 14 ವರ್ಷ ಜೈಲು ಶಿಕ್ಷೆ ಪೂರ್ಣಗೊಳಿಸಿದ ಧರ್ಮೇಂದ್ರ ಇದೀಗ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಮೇ 5 ರಂದು ಛತರ್ಪುರ್ನ ಲವಕುಶ ನಗರದಲ್ಲಿ ಈ ಮದುವೆ ನೆರವೇರಿದ್ದು, ಇದು ಚರ್ಚೆಯ ವಿಷಯವಾಗಿದೆ.
ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ ಧರ್ಮೇಂದ್ರ : ಭೀಕರ ಕೊಲೆ ಪ್ರಕರಣದಲ್ಲಿ ಧರ್ಮೇಂದ್ರ ಅಲಿಯಾಸ್ ಅಭಿಲಾಷ್ 14 ವರ್ಷಗಳ ಜೀವವಾಧಿ ಶಿಕ್ಷೆ ಅನುಭವಿಸಿ, 2020ರಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದರು. ಧರ್ಮೇಂದ್ರ ಜೈಲಿನಲ್ಲಿರುವಾಗ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಅಧಿಕಾರಿ ಫಿರೋಜಾ ಖಾತೂನ್ ಕೂಡ ಈತನ ಶಿಕ್ಷೆ ಅವಧಿ ಮುಗಿದ ಬಳಿಕ ಮದುವೆ ಮಾಡಿಕೊಳ್ಳಲು ಕಾದಿದ್ದರು.
ಬಿಡುಗಡೆ ಬೆನ್ನಲ್ಲೇ ಮದುವೆ: ಅಧಿಕಾರಿ ಮತ್ತು ಸಜಾಬಂಧಿ ನಡುವಿನ ಪ್ರೀತಿ ಆಳವಾಗಿ ಬೇರೂರಿದ್ದು, ಬಿಡುಗಡೆ ಆದ ಮೇಲೆ ಮದುವೆಯಾಗುವ ನಿರ್ಧಾರ ಮಾಡಿದ್ದರು. ಆದರೆ ಬಿಡುಗಡೆಗೊಂಡ ಐದು ವರ್ಷಗಳ ಬಳಿಕ ಇದೀಗ ಧರ್ಮೇಂದ್ರ ಜೊತೆ ವಿವಾಹ ಬಂಧನಕ್ಕೊಳಗಾಗಿದ್ದಾರೆ. ಫಿರೋಜ್ ಖಾತೂನ್ ಪ್ರಸ್ತುತ ಸತ್ನಾ ಕೇಂದ್ರೀಯ ಕಾರಾಗೃಹದಲ್ಲಿ ರೌಂಡ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

















