ಚಿಕ್ಕಮಗಳೂರು ಶುಕ್ರವಾರ (ಮೇ 08): ಆಟವಾಡುವ ವೇಳೆ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಮಗುವನ್ನು 12 ಗಂಟೆ ಕಾರ್ಯಾಚರಣೆ ನಡೆಸಿ ಪೊಲೀಸರು ಪತ್ತೆ ಮಾಡಿರುವ ಘಟನೆ ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದಲ್ಲಿ ನಡೆದಿದೆ. ಟೀ ಎಸ್ಟೇಟ್ನಲ್ಲಿ ಕೆಲಸಕ್ಕೆ ಬಂದಿದ್ದ ಮಧ್ಯಪ್ರದೇಶ ಮೂಲದ ಗೋನು, ಸೋನು ದಂಪತಿಯ 1.5 ವರ್ಷದ ಗಂಡು ಮಗು ನಿನ್ನೆ ಸಂಜೆ ಕಳೆದುಹೋಗಿತ್ತು. ಮೂಡಿಗೆರೆ ಸಿಪಿಐ, ಬಾಳೂರು ಪಿಎಸ್ಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮಗುವನ್ನು ಕಂಡು ಹಿಡಿಯುವಲ್ಲಿ ತಂಡ ಯಶಸ್ವಿಯಾಗಿದೆ ಎನ್ನಲಾಗಿದೆ.
ಈ ಕುರಿತ್ತಾಗಿ ಮೂವರು ಮಕ್ಕಳ ಜೊತೆ ಆಡವಾಡುತ್ತಾ ಕಾಫಿ ತೋಟಕ್ಕೆ ಬಂದಿದ್ದ ಮಗು ನಾಪತ್ತೆಯಾಗಿತ್ತು. ತೀವ್ರ ಹುಡುಕಾಟದ ನಂತರ ಮಗು ಸುರಕ್ಷಿತವಾಗಿ ಪತ್ತೆಯಾಗಿದ್ದು, ಶೋಧ ನಡೆಸುವವರ ಕಣ್ಣಿಗೆ ಮಗು ಬೀಳುವಾಗ ಅದು ಮಲಗಿತ್ತು ಎಂಬುದು ಗೊತ್ತಾಗಿದೆ. ನಿನ್ನೆ ಸಂಜೆ ಕಳೆದುಹೋಗಿದ್ದ ಮಗುವನ್ನು ಸತತ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಂದು ಬೆಳಗ್ಗೆ ತೋಟದಲ್ಲಿ ಪತ್ತೆಮಾಡಿ, ಹೆತ್ತವರ ಮಡಿಲಿಗೆ ಮರಳಿ ಸೇರಿಸಿದ್ದಾರೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಮಾಹಿತಿ ತಿಳಿದುಬಂದಿದೆ.

















