ಮನೆ ಸುದ್ದಿ ಜಾಲ ಆಸ್ಪತ್ರೆಗೆ ದಾಖಲಾದ ನೊಬೆಲ್ ಪ್ರಶಸ್ತಿ ವಿಜೇತೆ : ನರ್ಗೆಸ್ ಮೊಹಮ್ಮದಿ ಟೆಹ್ರಾನ್

ಆಸ್ಪತ್ರೆಗೆ ದಾಖಲಾದ ನೊಬೆಲ್ ಪ್ರಶಸ್ತಿ ವಿಜೇತೆ : ನರ್ಗೆಸ್ ಮೊಹಮ್ಮದಿ ಟೆಹ್ರಾನ್

0

ಬೈರುತ್, ಲೆಬನಾನ್​: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮತ್ತು ಕಾರ್ಯಕರ್ತೆ ನರ್ಗೆಸ್ ಮೊಹಮ್ಮದಿ ಅವರು ಜೈಲಿನಲ್ಲಿ ಕುಸಿದು ಬಿದ್ದ ಒಂದು ವಾರಕ್ಕೂ ಹೆಚ್ಚು ಕಾಲದ ನಂತರ ಟೆಹ್ರಾನ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಅವರ ಪ್ರತಿಷ್ಠಾನ ಭಾನುವಾರ ತಿಳಿಸಿದೆ ಎನ್ನಲಾಗುತ್ತಿದೆ.

ಅವರ ಕುಟುಂಬ ಮತ್ತು ಇತರರು ಅವರ ಸ್ಥಿತಿ ಗಂಭೀರವಾಗಿದೆ ಎಂದು ದಿನಗಟ್ಟಲೇ ಮನವಿ ಮಾಡಿದ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅವರೀಗ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಆದರೆ, ಅವರಿಗೆ ಶಿಕ್ಷೆಯಿಂದ ಎಷ್ಟು ಸಮಯದವರೆಗೆ ರಿಲೀಫ್ ನೀಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಪ್ರತಿಷ್ಠಾನ ತಿಳಿಸಿದೆ. ಮೊಹಮ್ಮದಿಯನ್ನು ಝಂಜಾನ್ ಜೈಲಿನಲ್ಲಿ ಡಿಸೆಂಬರ್‌ನಿಂದ ಬಂಧಿಸಲಾಗಿತ್ತು. ಅವರು ಎರಡು ಬಾರಿ ಪ್ರಜ್ಞೆ ಕಳೆದುಕೊಂಡಿದ್ದರು. ಹಾಗಾಗಿ, ಅವರನ್ನು ಮೇ 1 ರಂದು ಸ್ಥಳೀಯ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಈ ಕುರಿತು ಅವರ ಪ್ರತಿಷ್ಠಾನ ಅಸೋಸಿಯೇಟೆಡ್ ಪ್ರೆಸ್‌ನೊಂದಿಗೆ ಮಾತನಾಡಿದ್ದು, ನರ್ಗೆಸ್ ಮೊಹಮ್ಮದಿ ಅವರಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿರುವುದು ಸಾಕಾಗುವುದಿಲ್ಲ.

ಅವರಿಗೆ ‘ಶಾಶ್ವತ, ವಿಶೇಷ ಆರೈಕೆ’ಯ ಅಗತ್ಯವಿದೆ ಎಂದು ಹೇಳಿದೆ. ಉಳಿದಿರುವ 18 ವರ್ಷಗಳ ಶಿಕ್ಷೆಯನ್ನು ಎದುರಿಸಲು ಅವರು ಎಂದಿಗೂ ಜೈಲಿಗೆ ಹಿಂತಿರುಗುವುದಿಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಈಗ ಅವರ ವಿರುದ್ಧ ಆರೋಪಗಳನ್ನು ವಜಾಗೊಳಿಸುವಂತೆ ಒತ್ತಾಯಿಸುವ ಸಮಯ ಬಂದಿದೆ ಎಂದಿದೆ. ಮೊಹಮ್ಮದಿಯವರ ಇರಾನ್ ಮೂಲದ ವಕೀಲ ಮೊಸ್ತಫಾ ನಿಲಿ ಅವರು ಸಾಮಾಜಿಕ ಮಾಧ್ಯಮವೊಂದರಲ್ಲಿ ಮಾತನಾಡಿದ್ದು, ‘ಸರ್ಕಾರ ನೇಮಿಸಿದ ವೈದ್ಯಕೀಯ ಪರೀಕ್ಷಕರಾದ ಕಾನೂನು ವೈದ್ಯಕೀಯ ಸಂಸ್ಥೆಯ ನಿರ್ಧಾರದ ನಂತರ ಅವರನ್ನು ಆಸ್ಪತ್ರೆಗೆ ವರ್ಗಾಯಿಸುವ ಆದೇಶವನ್ನು ಹೊರಡಿಸಲಾಗಿದೆ’ ಎಂದು ಹೇಳಿದ್ದಾರೆ. ‘ಅವರಿಗೆ ಬಹು ಅನಾರೋಗ್ಯ ಇರುವುದರಿಂದಾಗಿ ಅವರು ಜೈಲಿನ ಹೊರಗೆ ಮತ್ತು ತಮ್ಮದೇ ಆದ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆಯನ್ನು ಮುಂದುವರಿಸಬೇಕಾಗಿದೆ’ ಎಂದು ಅವರು ತಿಳಿಸಿದ್ದಾರೆ.

ನಾರ್ವೆಯ ಓಸ್ಲೋದಲ್ಲಿ ನೆಲೆಸಿರುವ ಮೊಹಮ್ಮದಿಯವರ ಸಹೋದರ ಹಮೀದ್ರೇಜಾ ಮೊಹಮ್ಮದಿ ಅವರು ಮಾತನಾಡಿದ್ದು, ವೈದ್ಯಕೀಯ ಪರೀಕ್ಷಕರು ಈ ಹಿಂದೆ ಅವರನ್ನು ಟೆಹ್ರಾನ್‌ಗೆ ವರ್ಗಾಯಿಸಲು ಶಿಫಾರಸು ಮಾಡಿದ್ದರು. ಆದರೆ, ಅವರ ನಿರ್ಧಾರವನ್ನು ನಿರ್ಬಂಧಿಸಲಾಯಿತು ಎಂದು ಹೇಳಿದ್ದರು. ಇರಾನ್‌ನ ಗುಪ್ತಚರ ಸಂಸ್ಥೆಯನ್ನು ದೂಷಿಸಿದ ಅವರು, ‘ನನಗೆ ಈಗ ನಿರಾಳವಾಗಿದೆ. ನಾನು ಸುಲಭವಾಗಿ ಉಸಿರಾಡಬಲ್ಲೆ’ ಎಂದು ತಿಳಿಸಿದ್ದಾರೆ. ಹಕ್ಕುಗಳ ಕಾರ್ಯಕರ್ತೆ ಮತ್ತು ಮಹಿಳಾ ಹಕ್ಕುಗಳ ಪ್ರತಿಪಾದಕಿಯಾದ ನರ್ಗೆಸ್ ಮೊಹಮ್ಮದಿ ಅವರು 2023ರಲ್ಲಿ ಜೈಲಿನಲ್ಲಿದ್ದಾಗ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡರು. ಅವರ ವೃತ್ತಿಜೀವನದ ಉದ್ದಕ್ಕೂ ಪದೇ ಪದೆ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ಇತ್ತೀಚಿಗೆ ಅವರನ್ನು ಈಶಾನ್ಯ ಇರಾನಿನ ನಗರವಾದ ಮಶಾದ್‌ನಲ್ಲಿ ಮತ್ತೊಮ್ಮೆ ಬಂಧಿಸಲಾಗಿತ್ತು ಎಂದು ತಿಳಿದುಬಂದಿದೆ.