ಮನೆ ಸುದ್ದಿ ಜಾಲ ಬಾರ್​ನಿಂದ ಆಚೆ ಬಂದು ಜಗಳ, ಕಲ್ಲಿನಿಂದ ಹೊಡೆದು ವ್ಯಕ್ತಿಯ ಕೊಲೆ : ಹಾವೇರಿ

ಬಾರ್​ನಿಂದ ಆಚೆ ಬಂದು ಜಗಳ, ಕಲ್ಲಿನಿಂದ ಹೊಡೆದು ವ್ಯಕ್ತಿಯ ಕೊಲೆ : ಹಾವೇರಿ

0

ಹಾವೇರಿ: ತಾಲೂಕಿನ ಕಬ್ಬೂರು ಗ್ರಾಮದ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ ಬೆಳಗ್ಗೆ  ನೆರೆಹೊರೆಯವನೇ ವ್ಯಕ್ತಿಯನ್ನು ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ ಎನ್ನಲಾಗಿದೆ.

ನಿಂಗಪ್ಪ (45) ಹತ್ಯೆಗೀಡಾದ ವ್ಯಕ್ತಿ, ಶಿವಪ್ಪ ಕೊಲೆ ಆರೋಪಿ. ಬಾರ್​ನಿಂದ ಹೊರಬಂದು ಕಲ್ಲನ್ನು ತೆಗೆದುಕೊಂಡ ಆರೋಪಿ ಶಿವಪ್ಪ ನಿಂಗಪ್ಪನ ತಲೆ‌ ಮೇಲೆ ಎತ್ತಿಹಾಕಿದ್ದಾನೆ. ಪರಿಣಾಮ‌ ನಿಂಗಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ‌ ಸ್ಥಳಕ್ಕಾಗಮಿಸಿದ ಹಾವೇರಿ ಡಿವೈಎಸ್ಪಿ ಹಾಗೂ ಎಸ್ಪಿ ಯಶೋಧಾ ವಂಟಗೋಡಿ ಸ್ಥಳ ಪರಿಶೀಲನೆ‌ ನಡೆಸಿ, ಕೊಲೆಗೆ‌ ಸಂಬಂಧಿಸಿದ‌ ಮಾಹಿತಿಗಳನ್ನು ಕಲೆಹಾಕಿದರು. ಕೊಲೆಯಾದ ನಿಂಗಪ್ಪ ಮತ್ತು ಕೊಲೆಗೈದ ಶಿವು ಇಬ್ಬರು ಅಕ್ಕಪಕ್ಕದ ಮನೆಯವರು. ಇಬ್ಬರು ಸಂಬಂಧಿಕರು ಸಹ‌ ಹೌದು. ಇಬ್ಬರು ಜೊತೆಯಲ್ಲಿಯೇ ಮದ್ಯ ಸೇವನೆ ಮಾಡುತ್ತಿದ್ದರು. ಹಲವು‌ ಸಲ ಇವರ ನಡುವೆ‌ ಜಗಳವಾಗಿದೆ‌. ಆದರೆ ಮತ್ತೆ ವೈಷಮ್ಯ ಮರೆತು ಒಂದಾಗುತ್ತಿದ್ದರು. ಸೋಮವಾರ ಬೆಳಗ್ಗೆ ಇಬ್ಬರೂ ಮದ್ಯ ಸೇವಿಸಿದ್ದಾರೆ ಎನ್ನಲಾಗಿದೆ.

ನಂತರ ಮದ್ಯದ ಅಂಗಡಿಯಿಂದ ಹೊರಗೆ‌ ಬಂದಿದ್ದಾರೆ. ನಂತರ ಇಬ್ಬರ‌ ನಡುವೆ ಘರ್ಷಣೆ ಆರಂಭವಾಗಿದೆ. ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದು, ಕೊನೆಯಲ್ಲಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಕುರಿತಂತೆ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕೊಲೆಯಾದ ಹಿನ್ನೆಲೆ ಗ್ರಾಮಸ್ಥರ ದಂಡೇ ಸೇರಿತ್ತು. ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶವವನ್ನು ಮರಣೋತ್ತರ ಪರೀಕ್ಷೆಗೆ ಹಾವೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು ಎನ್ನಲಾಗಿದೆ.