ಮಂಡ್ಯ : ಹಳೇ ಮೈಸೂರು ಭಾಗದ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟೆ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕೆ.ಆರ್ ಸಾಗರ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಶ್ರೀ ನಾರಾಯಣಸ್ವಾಮಿ ದೇಗುಲ 2023ರ ನಂತರ ಮತ್ತೆ ಸಂಪೂರ್ಣ ಗೋಚರವಾಗಿದೆ. ಕೆಆರ್ ಸಾಗರ ಹಿನ್ನೀರಿನ ಬೋರೆ ಆನಂದೂರು ಬಳಿಯ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಶ್ರೀ ನಾರಾಯಣಸ್ವಾಮಿ ದೇವಾಲಯ 3 ವರ್ಷಗಳ ನಂತರ ಕಾಣಿಸುತ್ತಿದೆ. ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣ ಸಂದರ್ಭದಲ್ಲಿ ಸ್ಥಳಾಂತರವಾಗಿದ್ದ ದೇಗುಲದ ಗೋಪುರ ಮತ್ತು ಕಂಬಗಳು ಉಳಿದಿವೆ.
ಶ್ರೀನಾರಾಯಣಸ್ವಾಮಿ ಸುತ್ತಮುತ್ತಲಿನ 10 ಊರುಗಳ ಮನೆ ದೇವರಾಗಿದೆ. ಪ್ರಸ್ತುತ ಕೃಷ್ಣರಾಜಸಾಗರ ಬಳಿಯ ಮಜ್ಜಿಗೆಪುರ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದು, ಅಲ್ಲೇ ಮೂಲ ದೇವರಾದ ನಾರಾಯಣಸ್ವಾಮಿ ಇದ್ದು, ನಿತ್ಯ ಪೂಜೆ ಮಾಡಲಾಗುತ್ತಿದೆ. 2019 ರಲ್ಲಿ ಕಂಡ ದೇಗುಲ ನಂತರ 2023 ರಲ್ಲಿ ಕಂಡಿತ್ತು. ಶ್ರೀ ನಾರಾಯಣಸ್ವಾಮಿಯ ಹಳೇ ದೇವಾಲಯ ಕೆಆರ್ಎಸ್ ಹಿನ್ನೀರಿನಲ್ಲಿ ಕಾಣಿಸುತ್ತಿದೆ. ಅಣೆಕಟ್ಟೆ ನಿರ್ಮಾಣ ಸಂದರ್ಭದಲ್ಲಿ ಗ್ರಾಮಗಳು ಸ್ಥಳಾಂತರವಾದಾಗ ಈ ದೇವರನ್ನ ಮಜ್ಜಿಗೆಪುರಕ್ಕೆ ಸ್ಥಳಾಂತರಿಸಲಾಯಿತು.
ಮಳೆ ಕಡಿಮೆಯಾಗತೊಡಗಿದ್ದು, ಹಿನ್ನೀರಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ದಿನದಿಂದ ದಿನಕ್ಕೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದ ನೀರಿಗೆ ಕೊರತೆ ಉಂಟಾಗಬಹುದೆಂಬ ಆತಂಕವಿದೆ. ಬೋರೆ ಆನಂದೂರು ಗ್ರಾಮದ ಬಳಿಯ ಕಗ್ಗಲಿ ಅರಣ್ಯ ವಲಯ ಪಕ್ಕದಲ್ಲಿ ಈರಣ್ಣ ಮತ್ತು ಸೂರಣ್ಣ ಎಂಬ ಎರಡು ದೇವರ ವಿಗ್ರಹಗಳು ಕಾಣಸಿಗುತ್ತಿವೆ. ಶಿವನ ಪೂಜೆ ಮಾಡುತ್ತಿರುವುದು ಮತ್ತು ವಿವಿಧ ಭಂಗಿಗಳ ಕೆತ್ತನೆ ಈ ಎರಡೂ ಕಲ್ಲುಗಳಲ್ಲಿ ಕಂಡುಬಂದಿದೆ.
ಇವುಗಳಲ್ಲಿ ಹಳೆಗನ್ನಡದಲ್ಲಿ ಬರಹವಿದ್ದು ಸತತವಾಗಿ ಹಿನ್ನೀರಿನಲ್ಲಿ ಮುಳುಗಿರುವ ಕಾರಣ ಮಸುಕಾಗಿದೆ. ಈ ಸ್ಥಳ ಹಿನ್ನೀರಿನ ಎತ್ತರ ಪ್ರದೇಶದಲ್ಲಿದ್ದು, ನೀರಿನ ಸಂಗ್ರಹ ಕಡಿಮೆಯಾಗಬಹುದೆಂಬ ಕಾರಣಕ್ಕೆ ಇಲ್ಲಿ ನದಿಗೆ ಅಣೆಕಟ್ಟು ನಿರ್ಮಿಸಲಾಗಿದೆ. ಆ ಸಂದರ್ಭದಲ್ಲಿ ಈ ಕಲ್ಲುಗಳು ಸ್ಥಾಪಿತವಾಗಿರಬಹುದೆಂಬುದು ಗ್ರಾಮದ ಹಿರಿಯರ ಅನಿಸಿಕೆಯಾಗಿದೆ.

















