ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ನಿಯಂತ್ರಿಸಲು ಭಾರತಕ್ಕೆ ಸಾಧ್ಯವಿದೆ ಎಂದು ಇರಾನ್ನ ವಿದೇಶಾಂಗ ಸಚಿವ ಅಭಿಪ್ರಾಯಪಟ್ಟಿದ್ದಾರೆ. ಭಾರತಕ್ಕೆ ಎಲ್ಲೆಡೆ ಬಹಳ ಉತ್ತಮ ಹೆಸರಿದೆ. ಹೀಗಾಗಿ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಭಾರತ ಬಹಳ ಪ್ರಮುಖ ಪಾತ್ರ ವಹಿಸಲು ಸಾಧ್ಯವಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.
ಬ್ರಿಕ್ಸ್ ಸಭೆಗಾಗಿ ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರಘ್ಚಿ, ಇರಾನ್ ಮತ್ತು ಪಶ್ಚಿಮ ಏಷ್ಯಾದ ಬಿಕ್ಕಟ್ಟನ್ನು ಒಳಗೊಂಡ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಾತುಕತೆ ಮತ್ತು ರಾಜತಾಂತ್ರಿಕತೆಯೊಂದೇ ಏಕೈಕ ಮಾರ್ಗವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಇರಾನ್ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮಿಲಿಟರಿ ಸಂಘರ್ಷದ ಮೂಲಕ ಪರಿಹಾರ ಸಿಗಲು ಸಾಧ್ಯವಿಲ್ಲ ಎಂಬುದು ನಮಗೂ ಗೊತ್ತಾಗಿದೆ. ಈ ಪ್ರದೇಶದಲ್ಲಿ ಸ್ಥಿರತೆ ಮತ್ತು ಶಾಂತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಭಾರತದ ಎಲ್ಲ ರೀತಿಯ ಪ್ರಯತ್ನವನ್ನು ನಾವು ಬೆಂಬಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇರಾನಿನ ಸಚಿವರು ಹಾರ್ಮುಜ್ ಜಲಸಂಧಿಯ ಸುತ್ತಲಿನ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದ್ದಾರೆ. ಹಾರ್ಮುಜ್ ಜಲಸಂಧಿ ತುಂಬಾ ಸಂಕೀರ್ಣವಾದುದು. ಜಾಗತಿಕ ತೈಲ ವ್ಯಾಪಾರಕ್ಕೆ ನಿರ್ಣಾಯಕವಾದ ಈ ಜಲಮಾರ್ಗದ ಮೂಲಕ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಇರಾನ್ ಸಹಾಯ ಮಾಡಲು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ನಮಗೆ ಅಮೆರಿಕದ ಮೇಲೆ ನಂಬಿಕೆಯಿಲ್ಲ. ವಿಶ್ವಾಸದ ಕೊರತೆಯಿಂದಾಗಿ ಅಮೆರಿಕದೊಂದಿಗೆ ಮಾತುಕತೆಗಳು ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ.
“ಯುದ್ಧ ಆರಂಭವಾಗಿ 40 ದಿನಗಳಾಗಿವೆ. ಈ ಸಮಯದಲ್ಲಿ ಇರಾನ್ ವಿರುದ್ಧದ ಆಕ್ರಮಣದಲ್ಲಿ ಯಾವುದೇ ಗುರಿಯನ್ನು ಸಾಧಿಸಲು ಅಮೆರಿಕ ವಿಫಲವಾಗಿದೆ. ನಮಗೆ ಅಮೆರಿಕನ್ನರ ಮೇಲೆ ನಂಬಿಕೆಯಿಲ್ಲ. ಯಾವುದೇ ರಾಜತಾಂತ್ರಿಕ ಪ್ರಯತ್ನದ ದಾರಿಯಲ್ಲಿ ಇದು ಮುಖ್ಯ ಅಡಚಣೆಯಾಗಿದೆ. ಅಮೆರಿಕನ್ನರನ್ನು ನಂಬದಿರಲು ನಮಗೆ ಹಲವು ಕಾರಣಗಳಿವೆ. ಆದರೆ ಅವರು ನಮ್ಮನ್ನು ನಂಬದಿರಲು ಯಾವುದೇ ಕಾರಣವಿಲ್ಲ” ಎಂದು ಅವರು ಹೇಳಿದ್ದಾರೆ.

















