ಕೊಡಗು (ಮೇ 18): ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಬಂದಿದ್ದ ಪ್ರವಾಸಿ ಮಹಿಳೆಯೊಬ್ಬರು ಸಾಕಾನೆಗಳ ಕಾಳಗದ ನಡುವೆ ಸಿಲುಕಿ ಸಾವೀಗೀಡಾದ ದಾರುಣ ಘಟನೆ ನಡೆದಿದೆ. ಚೆನ್ನೈ ಮೂಲದ ಜಿನ್ನು (33) ಎಂಬ ಮಹಿಳೆ ಆನೆಗಳ ನಡುವಿನ ಜಗಳದ ವೇಳೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇಂದು ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ದುಬಾರೆ ಶಿಬಿರದಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಶಿಬಿರದ ಸಾಕಾನೆಗಳಾದ ‘ಮಾರ್ತಾಂಡ’ ಮತ್ತು ‘ಕಂಜನ್’ ಎಂಬ ಎರಡು ಆನೆಗಳನ್ನು ನದಿಗೆ ಕರೆತರಲಾಗಿತ್ತು. ಮಾವುತ ಗೌಸ್ ಅವರು ಮಾರ್ತಾಂಡ ಆನೆಯನ್ನು ಸ್ನಾನ ಮಾಡಿಸಲು ನೀರಿಗೆ ಇಳಿಸುತ್ತಿದ್ದರು. ಈ ವೇಳೆ ಮಾರ್ತಾಂಡ ಆನೆಯನ್ನು ನೀರಿಗೆ ಸ್ವಲ್ಪ ಜೋರಾಗಿ ಇಳಿಸಿದಾಗ, ಅದು ಪಕ್ಕದಲ್ಲಿದ್ದ ಕಂಜನ್ ಆನೆಗೆ ತಗುಲಿದೆ ಎನ್ನಲಾಗಿದೆ. ತನ್ನ ದೇಹಕ್ಕೆ ಮಾರ್ತಾಂಡ ಆನೆ ಸ್ಪರ್ಶಿಸುತ್ತಿದ್ದಂತೆಯೇ ಕಂಜನ್ ಆನೆ ವಿಪರೀತ ಆಕ್ರೋಶಗೊಂಡಿದೆ. ತಕ್ಷಣವೇ ಮಾರ್ತಾಂಡನ ಮೇಲೆ ದಾಳಿ ಮಾಡಲು ಮುಂದಾಗಿದೆ.
ಈ ಎರಡು ಬೃಹತ್ ಆನೆಗಳ ನಡುವೆ ಇದ್ದಕ್ಕಿದ್ದಂತೆ ಶುರುವಾದ ಈ ಘರ್ಷಣೆಯಿಂದಾಗಿ ಅಲ್ಲಿದ್ದ ಪ್ರವಾಸಿಗರು ದಿಕ್ಕಾಪಾಲಾಗಿ ಓಡತೊಡಗಿದ್ದಾರೆ. ಆದರೆ, ದುರದೃಷ್ಟವಶಾತ್ ಪ್ರವಾಸಿ ಮಹಿಳೆ ಜಿನ್ನು ಅವರು ಆನೆಗಳ ಜಗಳದ ರಭಸಕ್ಕೆ ಸಿಲುಕಿದ್ದಾರೆ. ಆನೆಯ ಕಾಲಡಿ ಸಿಲುಕಿದ ಅಥವಾ ದಾಳಿಗೆ ಒಳಗಾದ ಮಹಿಳೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ
ಈ ದುರ್ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ. ಮೃತ ಜಿನ್ನು ಅವರ ಮೃತದೇಹವನ್ನು ತಕ್ಷಣವೇ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಾರ್ತಾಂಡ ಆನೆಯ ಮಾವುತ ಗೌಸ್ ಹಾಗೂ ಕಂಜನ್ ಆನೆಯ ಮಾವುತ ವಿಜಯ ಅವರು ಆನೆಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರೂ ಅಷ್ಟರಲ್ಲೇ ಅನಾಹುತ ಸಂಭವಿಸಿತ್ತು. ಈ ಕುರಿತು ದುಬಾರೆ ಸಾಕಾನೆ ಶಿಬಿರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ಆನೆಗಳಿಗೆ ಸ್ನಾನ ಮಾಡಿಸುವ ದೃಶ್ಯವನ್ನು ಹತ್ತಿರದಿಂದ ನೋಡಲು ಜನರು ಮುಗಿಬೀಳುತ್ತಾರೆ. ಇಂತಹ ಸಂವೇದನಾಶೀಲ ಸಂದರ್ಭದಲ್ಲಿ ಪ್ರವಾಸಿಗರು ಮತ್ತು ಆನೆಗಳ ನಡುವೆ ಇರಬೇಕಾದ ಸುರಕ್ಷಿತ ಅಂತರದ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಬಹುದು.

















