ವಾಷಿಂಗ್ಟನ್ (ಅಮೆರಿಕ): ರಷ್ಯಾ ತೈಲ ಖರೀದಿ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಮತ್ತೊಂದು ತಿಂಗಳಿಗೆ ವಿನಾಯಿತಿ ನೀಡಿ ಅಮೆರಿಕ ವಿಸ್ತರಿಸಿದೆ. ಈಗಾಗಲೇ ಸಮುದ್ರದಲ್ಲಿರುವ ರಷ್ಯಾದ ತೈಲದ ಮೇಲೆ ನಿರ್ಬಂಧ ವಿನಾಯಿತಿ ವಿಸ್ತರಿಸಲಾಗಿದೆ ಎಂದು ತಿಳಿಸಿದೆ. ಏಪ್ರಿಲ್ 17 ಅಥವಾ ಅದಕ್ಕೂ ಮೊದಲು ಸಮುದ್ರದಲ್ಲಿ ಸಿಲುಕಿರುವ ರಷ್ಯಾದ ತೈಲದ ಮೇಲಿನ ನಿರ್ಬಂಧಗಳಿಂದ ವಿನಾಯಿತಿಯನ್ನು ಜೂನ್ 17 ರವರೆಗೆ ವಿಸ್ತರಿಸುವ ಆದೇಶವನ್ನು ಅಮೆರಿಕದ ಖಜಾನೆ ಇಲಾಖೆ ಸೋಮವಾರ ಹೊರಡಿಸಿದೆ ಎಂದು ತಿಳಿದುಬಂದಿದೆ.
ಈ ಕುರಿತು ಮೇ 18ರ ವರೆಗೆ ಜಾರಿಗೆ ಬರುವಂತೆ ಈ ವಿನಾಯಿತಿಯನ್ನು ವಿಸ್ತರಿಸಿರುವುದಾಗಿ ಅಮೆರಿಕ ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಈ ಹಿಂದೆ ಪಶ್ಚಿಮ ಏಷ್ಯಾ ಬಿಕ್ಕಟ್ಟಿನಲ್ಲಿ ಏಪ್ರಿಲ್ 17ರಿಂದ ಮೇ 16ರವರೆಗೆ ಒಂದು ತಿಂಗಳ ಕಾಲ ತೈಲ ಖರೀದಿಗೆ ಭಾರತ ಸೇರಿದಂತೆ ಹಲವು ದೇಶಗಳಿಗೆ ಅಮೆರಿಕ ವಿನಾಯಿತಿ ನೀಡಿತ್ತು. ಇದೀಗ ಇದರ ಅವಧಿ ಮುಕ್ತಾಯ ಹಂತದಲ್ಲಿದ್ದು, ತೈಲ ಬಿಕ್ಕಟ್ಟಿನ ಪರಿಸ್ಥಿತಿ ಮುಂದುವರೆದ ಹಿನ್ನೆಲೆಯಲ್ಲಿ ಈ ಕ್ರಮ ನಡೆಸಲಾಗಿದೆ. ಇದಕ್ಕೆ ಮೊದಲು ಮಾರ್ಚ್ 5 ರಿಂದ ಪ್ರಾರಂಭವಾಗುವ ಒಂದು ತಿಂಗಳ ಕಾಲ ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತಕ್ಕೆ ಅಮೆರಿಕ ನಿರ್ಬಂಧಗಳಿಂದ ವಿನಾಯಿತಿ ನೀಡಿತ್ತು. ಕೆಲವು ದಿನಗಳ ನಂತರ, ಇದೇ ರೀತಿಯ ವಿನಾಯಿತಿಯನ್ನು ಹಲವಾರು ಇತರ ದೇಶಗಳಿಗೆ ವಿಸ್ತರಿಸಲಾಯಿತು, ಅದು ಏಪ್ರಿಲ್ 11 ರಂದು ಕೊನೆಗೊಂಡಿತು.
ಆದರಿಂದ ಪಶ್ಚಿಮ ಏಷ್ಯಾದಲ್ಲಿನ ಇಸ್ರೇಲ್, ಯುಎಸ್ ಹಾಗೂ ಇರಾನ್ ಸಂಘರ್ಷದಿಂದಾಗಿ ಜಗತ್ತು ತೈಲ ಬಿಕ್ಕಟ್ಟು ಎದುರಿಸುವಂತಾಗಿದೆ. ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಸ್ಥಿರತೆಯನ್ನು ಉತ್ತೇಜಿಸಲು, ಅಮೆರಿಕ ನಿರ್ಣಾಯಕ ಕ್ರಮ ನಡೆಸಲು ಉಕ್ರೇನ್ ಮೇಲಿನ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ತೈಲ ಖರೀದಿ ಮೇಲೆ ವಿಧಿಸಿದ್ದ ನಿರ್ಬಂಧಗಳಿಗೆ ವಿನಾಯಿತಿ ನೀಡಲಾಯಿತು. ಈ ಕ್ರಮವೂ ಜಾಗತಿಕವಾಗಿ ಪೂರೈಕೆ ಹೆಚ್ಚಿಸಲು ಇತರೆ ದೇಶಗಳು ಪ್ರಸ್ತುತ ಸಮುದ್ರದಲ್ಲಿ ಸಿಲುಕಿರುವ ರಷ್ಯಾದ ತೈಲವನ್ನು ಖರೀದಿಸಲು ತಾತ್ಕಾಲಿಕ ಅನುಮತಿ ನೀಡಲಾಗುತ್ತಿದೆ. ಇದು ಅಲ್ಪಾವಧಿ ಕ್ರಮವಾಗಿದ್ದು, ಸಾಗಣೆಯಲ್ಲಿರುವ ತೈಲಕ್ಕೆ ಮಾತ್ರ ಅನ್ವಯಿಸುತ್ತದೆ. ಇದು ರಷ್ಯಾ ಸರ್ಕಾರಕ್ಕೆ ಗಮನಾರ್ಹ ಆರ್ಥಿಕ ಲಾಭ ಒದಗಿಸುವುದಿಲ್ಲ ಎಂದು ಅಮೆರಿಕ ತಿಳಿಸಿತು. ಅಮೆರಿಕ ಇರಾನ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಮಾರ್ಗದ ಮೇಲೆ ಇರಾನ್ ಹಿಡಿತ ಹೊಂದಿರುವುದರಿಂದ ತೈಲೋತ್ಪಾದನೆ ಕುಸಿದಿದೆ. ಇದರಿಂದ ಜಾಗತಿಕವಾಗಿ ಇಂಧನ ಬಿಕ್ಕಟ್ಟು ಎದುರಾಗಿದೆ ಎನ್ನಬಹುದು.

















