ಹುಬ್ಬಳ್ಳಿ: ತುರ್ತು ಪರಿಸ್ಥಿತಿಗಳು, ಅಪಘಾತಗಳು ಅಥವಾ ಅಪಹರಣದಂತಹ ಕ್ಲಿಷ್ಟಕರ ರಕ್ಷಣಾ ಕಾರ್ಯಾಚರಣೆಗಳನ್ನು ಸಮರ್ಥವಾಗಿ ನಿಭಾಯಿಸಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ‘ಮೊಬೈಲ್ ಕಮಾಂಡ್ ಪೋಸ್ಟ್’ ವಾಹನವನ್ನು ನಿಯೋಜಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇಂತಹ ಹೈಟೆಕ್ ಸೌಲಭ್ಯವನ್ನು ಪಡೆದುಕೊಂಡ ರಾಜ್ಯದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಹುಬ್ಬಳ್ಳಿ ಪಾತ್ರವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ಅವರು, ಸುಮಾರು 87 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮೊಬೈಲ್ ವಾಹನವನ್ನು ಸಿದ್ಧಪಡಿಸಲಾಗಿದ್ದು, ಇದರೊಳಗೆ ಒಂದೇ ಸಲಕ್ಕೆ 10 ಜನರು ಕುಳಿತು ಕಾರ್ಯನಿರ್ವಹಿಸಬಹುದಾದ ಆಸನ ಸಾಮರ್ಥ್ಯವಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಕರ್ನಾಟಕದಲ್ಲಿ ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ ಮತ್ತು ಮೈಸೂರು ಸೇರಿದಂತೆ ಒಟ್ಟು ನಾಲ್ಕು ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿದೆ. ಇವುಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವೇ ಅತ್ಯಂತ ಹೆಚ್ಚು ಪ್ರಯಾಣಿಕರ ಸಂಚಾರವನ್ನು ಹೊಂದಿರುವುದರಿಂದ, ಕಮಾಂಡ್ ಪೋಸ್ಟ್ ವಾಹನದ ನಿಯೋಜನೆಗಾಗಿ ಮೊದಲ ಆದ್ಯತೆಯ ಮೇರೆಗೆ ಇದನ್ನು ಆಯ್ಕೆ ಮಾಡಲಾಗಿದೆ. ಸುಧಾರಿತ ಸಂವಹನ ಮತ್ತು ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿರುವ ಈ ವಾಹನವು, ಯಾವುದೇ ತುರ್ತು ಸಂದರ್ಭ ಎದುರಾದರೂ ಅಧಿಕಾರಿಗಳು ಸ್ಥಳದಲ್ಲೇ ಇದ್ದು ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಒಂದು ಸುಸಜ್ಜಿತ ಸಭೆಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಅಧಿಕಾರಿಗಳು ತಮ್ಮ ಕಚೇರಿಗಳಿಂದ ಕಾರ್ಯನಿರ್ವಹಿಸುವುದು ಕಷ್ಟಕರವಾದಾಗ, ವಿವಿಧ ರಕ್ಷಣಾ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲು ಈ MCP ವಾಹನವು ಪ್ರಮುಖ ಕೊಂಡಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೂ ಈ ಕಮಾಂಡ್ ಪೋಸ್ಟ್ ವಾಹನವು ತಾಂತ್ರಿಕವಾಗಿ ಅತ್ಯಂತ ಬಲಿಷ್ಠವಾಗಿದ್ದು,
ಇದರಲ್ಲಿ ವಾಹನವು ವೆರಿ ಹೈ ಫ್ರೀಕ್ವೆನ್ಸಿ (VHF) ಮತ್ತು ಆಲ್ಟ್ರಾ ಹೈ ಫ್ರೀಕ್ವೆನ್ಸಿ (UHF) ಸಂವಹನ ವ್ಯವಸ್ಥೆಗಳನ್ನು ಹೊಂದಿದೆ. ಇದು ಏರ್ ಟ್ರಾಫಿಕ್ ಕಂಟ್ರೋಲ್ (ATC), ಅಗ್ನಿಶಾಮಕ ದಳ ಮತ್ತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ನೆರವಾಗುತ್ತದೆ. ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶಗಳಲ್ಲೂ ಸಂವಹನ ಕಡಿತಗೊಳ್ಳದಂತೆ ತಡೆಯಲು ಇದರಲ್ಲಿ ಉಪಗ್ರಹ ಲಿಂಕ್ಗಳು ಮತ್ತು ಹೈ-ಸ್ಪೀಡ್ ವೈಫೈ ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ವಾಹನದ ಒಳಭಾಗದಲ್ಲಿ ಬೃಹತ್ ವಿಡಿಯೋ ಗೋಡೆಗಳು ಮತ್ತು ಮಲ್ಟಿಪಲ್ ಮಾನಿಟರ್ಗಳನ್ನು ಅಳವಡಿಸಲಾಗಿದೆ. ಇವು ಸಿಸಿಟಿವಿ ಕ್ಯಾಮೆರಾಗಳು ಮತ್ತು ಡ್ರೋನ್ಗಳು ಸೆರೆಹಿಡಿಯುವ ದೃಶ್ಯಗಳನ್ನು ನೇರವಾಗಿ ಪ್ರಸಾರ ಮಾಡುತ್ತವೆ. ಇದು ಅಧಿಕಾರಿಗಳಿಗೆ ವಿಮಾನ ನಿಲ್ದಾಣ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ 360-ಡಿಗ್ರಿ ದೃಶ್ಯಾವಳಿಯನ್ನು ಒದಗಿಸಿ, ನಿಖರ ನಿಗಾ ಇಡಲು ಸಹಾಯ ಮಾಡುತ್ತದೆ ಎಂಬುದಾಗಿದೆ.
















