ದೊಡ್ಡಬಳ್ಳಾಪುರ : ಟೀ ಅಂಗಡಿ ಖಾಯಂ ಗಿರಾಕಿ ಆತ, ಟೀ ಕುಡಿಯುತ್ತಿದ್ದ ಆತ ಹಣ ಮಾತ್ರ ಕೊಡದೆ ಸಾಲ ಹೇಳುತ್ತಿದ್ದ, ಅಂಗಡಿಯಲ್ಲಿ ಅವನದ್ದು 200 ರೂಪಾಯಿ ಸಾಲ, ಮತ್ತೆ ಟೀ ಕುಡಿಯೊಕ್ಕೆ ಬಂದಿದ್ದಾನೆ, 200 ರೂಪಾಯಿ ಸಾಲ ತೀರಿಸು ಟೀ ಕೊಡ್ತಿನಿ ಅಂತಾ ಅಂಗಡಿ ಮಾಲೀಕ ಹೇಳಿದ್ದಾನೆ, ಇದಕ್ಕೆ ಸಿಟ್ಟಾದ ಆತ ದೊಣ್ಣೆಯಿಂದ ಹಲ್ಲೆ ಮಾಡಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ, ಚಿಕಿತ್ಸೆ ಫಲಕಾರಿಯಾಗದೆ ಟೀ ಅಂಗಡಿ ಮಾಲೀಕ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ಸಂಭವಿಸಿದೆ.
ದೊಡ್ಡಬಳ್ಳಾಪುರ ತಾಲೂಕಿನ ಅಪ್ಪಕಾರನಹಳ್ಳಿ ಗೇಟ್ ಬಳಿ ಮೇ 12 ರಂದು ಘಟನೆ ನಡೆದಿದ್ದು, ಹಲ್ಲೆಯಲ್ಲಿ ತೀರ್ವವಾಗಿ ಗಾಯಗೊಂಡಿದ್ದ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ, ಕೊಲೆ ಆರೋಪಿ ಮುನಿರಾಜು(41)ನನ್ನ ದೊಡ್ಡಬೆಳವಂಗಲ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೃತ ಮಂಜುನಾಥ್ ದ್ಯಾವಸಂದ್ರ ಗ್ರಾಮದ ನಿವಾಸಿ, ಕೊಲೆ ಆರೋಪಿ ಮುನಿರಾದು ಸಹ ಅದೇ ಗ್ರಾಮದ ನಿವಾಸಿ. ಮಂಜುನಾಥ್ ಜೀವನೋಪಯಕ್ಕಾಗಿ ಅಪ್ಪಕಾರನಹಳ್ಳಿ ಗೇಟ್ ಬಳಿ ಟೀ ಅಂಗಡಿಯನ್ನ ಇಟ್ಟುಕೊಂಡಿದ್ದ, ಮೇ 12ರಂದು ಬೆಳಗ್ಗೆ ಟೀ ಕುಡಿಯಲು ಟೀ ಅಂಗಡಿಗೆ ಆರೋಪಿ ಮುನಿರಾಜು ಬಂದಿದ್ದಾನೆ.
ಈ ವೇಳೆ ಹಳೆಯ ಸಾಲದ ವಿಚಾರವಾಗಿ ಮಂಜುನಾಥ್ ಮತ್ತು ಮುನಿರಾಜ್ ನಡುವೆ ಮಾತಿನ ಚಕಮಕಿ ಉಂಟಾಗಿದೆ.ಮುನಿರಾಜ್ ಮತ್ತೆ ಸಾಲದಲ್ಲಿ ಟೀ ಕೊಡುವಂತೆ ಕೇಳಿದ್ದಾನೆ. ಇದಕ್ಕೆ ಪ್ರತಿಯಾಗಿ ಮಂಜುನಾಥ್ ಹಳೆಯ ಸಾಲ ವಾಪಸ್ ನೀಡುವಂತೆ ಹೇಳಿದ್ದಾನೆ. ಈ ಮಾತುಕತೆ ಕೆಲವೇ ಕ್ಷಣಗಳಲ್ಲಿ ತೀವ್ರ ವಾಗ್ವಾದಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಮುನಿರಾಜ್, ಪಕ್ಕದಲ್ಲಿದ್ದ ನೀಲಗಿರಿ ಮರದ ದೊಣ್ಣೆಯನ್ನು ತೆಗೆದುಕೊಂಡು ಮಂಜುನಾಥ್ ಅವರ ತಲೆಗೆ ಮನಸೋಯಿಚ್ಚೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ತೀವ್ರವಾಗಿ ಗಾಯಗೊಂಡ ಮಂಜುನಾಥ್ ಅವರನ್ನು ತಕ್ಷಣವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಮುಂದುವರಿದಿದ್ದರೂ ಸ್ಥಿತಿ ಗಂಭೀರವಾಗಿದ್ದ ಕಾರಣ, ನಿನ್ನೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ಆರೋಪಿ ಮುನಿರಾಜ್ ಈ ಹಿಂದೆ ತನ್ನ ಹೆತ್ತ ತಾಯಿಗೆ ಚಾಕು ಹಾಕಿದ ಪ್ರಕರಣದಲ್ಲಿಯೂ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಬಂದು ಇದೀಗ ಈ ಭೀಕರ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

















