ಬೆಂಗಳೂರು ಗ್ರಾಮಾಂತರ (ಮೇ 20): ಆನೇಕಲ್ ತಾಲ್ಲೂಕಿನ ಚಿನ್ನಯ್ಯನ ಪಾಳ್ಯದಲ್ಲಿ. ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದ್ದಾಳೆ ಎಂಬ ಕಾರಣಕ್ಕೆ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಪ್ರಾಣದ ಹಂಗು ತೊರೆದು ಹೈಡ್ರಾಮಾ ಸೃಷ್ಟಿಸಿರುವ ಘಟನೆ ನಡೆದಿದ್ದು ಚಿನ್ನಯ್ಯನಪಾಳ್ಯದ ನಿವಾಸಿಯಾದ ಸೋಮಶೇಖರ್ ಎಂಬ ಯುವಕ ಕಳೆದ 3 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಆದರೆ, ಸೋಮಶೇಖರ್ ಚಟಗಳ ದಾಸನಾಗಿದ್ದೇ ಆತನ ಪ್ರೀತಿಗೆ ಮುಳುವಾಗಿದೆ ಎನ್ನಲಾಗುತ್ತಿದೆ.
ಈ ಕುರಿತು ಈತ ನಿರಂತರವಾಗಿ ಮದ್ಯಪಾನ ಮತ್ತು ಗಾಂಜಾ ಸೇವನೆ ಮಾಡುತ್ತಿದ್ದ ಎನ್ನಲಾಗಿದೆ. ಸೋಮಶೇಖರ್ನ ಈ ದುಶ್ಚಟಗಳಿಂದ ಬೇಸತ್ತಿದ್ದ ಯುವತಿ, ಇತ್ತೀಚೆಗೆ ಆತನೊಂದಿಗೆ ಲವ್ ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಅಲ್ಲದೆ, ‘ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದಳು. ಬುಧವಾರ ಬೆಳಿಗ್ಗೆ ಗಾಂಜಾ ಮತ್ತು ಎಣ್ಣೆ ಅಮಲಿನಲ್ಲಿ ತೇಲುತ್ತಿದ್ದ ಸೋಮಶೇಖರ್, ಪ್ರೇಯಸಿಗೆ ಫೋನ್ ಮಾಡಿದ್ದಾನೆ. ಈ ವೇಳೆ ಮತ್ತೆ ಮದುವೆಯ ಪ್ರಸ್ತಾಪ ಇಟ್ಟಾಗ ಯುವತಿ ನಿರಾಕರಿಸಿದ್ದಾಳೆ. ಇದರಿಂದ ಕೆರಳಿದ ಸೋಮಶೇಖರ್, ಮೊದಲು ಆಕೆಯ ಮನೆಯ ಶೀಟ್ಗಳನ್ನು ಹೊಡೆದು ಧ್ವಂಸಗೊಳಿಸಿ ದಾಂಧಲೆ ನಡೆಸಿದ್ದಾನೆ. ಅಲ್ಲಿಂದ ನೇರವಾಗಿ ಓಡಿ ಬಂದು ಮನೆ ಸಮೀಪವೇ ಇದ್ದ ಸಾವಿನ ದೂತನಂತಿರುವ ಹೈಟೆನ್ಷನ್ ವಿದ್ಯುತ್ ಕಂಬವನ್ನು ಹತ್ತಿದ್ದಾನೆ. ಸಾವಿರಾರು ವೋಲ್ಟ್ ವಿದ್ಯುತ್ ಹರಿಯುವ ಕಂಬದ ತುತ್ತತುದಿಗೆ ಏರಿ ಕುಳಿತ ಸೋಮಶೇಖರ್, ‘ನನ್ನ ಪ್ರೇಯಸಿ ಸ್ಥಳಕ್ಕೆ ಬರಬೇಕು, ಅವಳು ಮದುವೆಗೆ ಒಪ್ಪುವವರೆಗೆ ನಾನು ಕೆಳಗಿಳಿಯುವುದಿಲ್ಲ’ ಎಂದು ಹಠ ಹಿಡಿದಿದ್ದಾನೆ.
ಆದರಿಂದ ಇದನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೋಮಶೇಖರ್ನ ತಂದೆಯೇ ಮಗನ ಈ ಹುಚ್ಚಾಟವನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಆನೇಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಎಷ್ಟೇ ಮನವೊಲಿಸಿದರೂ ಸೋಮಶೇಖರ್ ಮಾತ್ರ ಕೆಳಗಿಳಿಯಲು ಒಪ್ಪದೆ ಹಠ ಮುಂದುವರಿಸಿದ್ದಾನೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ನೂರಾರು ಗ್ರಾಮಸ್ಥರು ಜಮಾಯಿಸಿದ್ದು, ಯುವಕನ ಹುಚ್ಚಾಟಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಾಣದ ಹಂಗು ತೊರೆದು ಈತ ಮಾಡುತ್ತಿರುವ ಹೈಡ್ರಾಮಾದಿಂದಾಗಿ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯುವಕನನ್ನು ಕೆಳಗಿಳಿಸಲು ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಶತಪ್ರಯತ್ನ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳದ ನಿರಂತರ ಪ್ರಯತ್ನದ ಬಳಿಕ ಹೈಟೆನ್ಷನ್ ಕಂಬದಿಂದ ಪಾಗಲ್ ಪ್ರೇಮಿ ಸೋಮಶೇಖರ್ನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಆತನನ್ನು ನಂತರ ಆಸ್ಪತ್ರೆಗೆ ಸಾಗಿಸಿದ್ದಾರೆ ಎನ್ನಲಾಗುತ್ತಿದೆ.

















