ಬೀದರ್, ಮೇ 22: ಬೀದರ್ ನಗರದ ಬ್ರಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ಯುವ ವೈದ್ಯನ ಮೇಲೆ ಕೆಲ ಯುವಕರು ಹಲ್ಲೆ ನಡೆಸಿದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚಿಕಿತ್ಸೆ ನೀಡುವ ವಿಚಾರದಲ್ಲಿ ಉಂಟಾದ ಮಾತಿನ ಚಕಮಕಿ ಬಳಿಕ ಕೆಲ ಕಿಡಿಗೇಡಿಗಳು ಆಸ್ಪತ್ರೆಯೊಳಗೆ ನುಗ್ಗಿ ವೈದ್ಯನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ವೈದ್ಯ ತುಕಾರಾಮ್ ಅವರಿಗೆ ಆಸ್ಪತ್ರೆಯ SICU ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮಾಹಿತಿಯ ಪ್ರಕಾರ, ಮೇ 21ರ ತಡರಾತ್ರಿ ಚಿಕಿತ್ಸೆಗಾಗಿ ಕೆಲ ಯುವಕರು ಬ್ರಿಮ್ಸ್ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ಬೈಕ್ ಅಪಘಾತದಲ್ಲಿ ಸ್ವಲ್ಪ ಪ್ರಮಾಣದ ಗಾಯಗೊಂಡಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುವ ಸಂದರ್ಭ ವೈದ್ಯರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಲಾಗಿದೆ. ಮೊದಲಿಗೆ ಮಾತಿನ ಚಕಮಕಿ ನಡೆದಿದ್ದು, ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ವೈದ್ಯ ತುಕಾರಾಮ್ ಅವರ ಹೇಳಿಕೆಯ ಪ್ರಕಾರ, ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದ ಯುವಕರು ಎಂಎಲ್ಸಿ ಮಾಡಬಾರದು ಎಂದು ಒತ್ತಾಯಿಸಿದ್ದರಂತೆ. ನಂತರ ವೈದ್ಯರು ಎಂಎಲ್ಸಿ ಪ್ರಕ್ರಿಯೆ ಕೈಬಿಟ್ಟು ಚಿಕಿತ್ಸೆ ನೀಡಿದರೂ ಸಹ ಯುವಕರು ಮತ್ತೆ ಗಲಾಟೆ ಆರಂಭಿಸಿದ್ದಾರೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಕೆಲವರು ಮತ್ತೆ ಆಸ್ಪತ್ರೆಯೊಳಗೆ ಬಂದು ವೈದ್ಯನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆಯಿಂದ ಗಾಯಗೊಂಡ ವೈದ್ಯ ತುಕಾರಾಮ್ ಅವರನ್ನು ತಕ್ಷಣವೇ SICU ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ಆಸ್ಪತ್ರೆ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವೈದ್ಯರು ಹಾಗೂ ಸಿಬ್ಬಂದಿಯಲ್ಲಿ ಭದ್ರತೆ ಕುರಿತು ಪ್ರಶ್ನೆಗಳು ಮೂಡಿವೆ. ಸರ್ಕಾರಿ ಆಸ್ಪತ್ರೆಯಲ್ಲಿಯೇ ವೈದ್ಯರಿಗೆ ಸುರಕ್ಷತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆಯೇ ಎಂಬ ಚರ್ಚೆ ಆರಂಭವಾಗಿದೆ.
ಘಟನೆ ನಡೆದಿರುವುದು ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ವೈದ್ಯರಿಂದ ಮಾಹಿತಿ ಪಡೆದು ಪ್ರಕರಣದ ಬಗ್ಗೆ ತನಿಖೆ ಆರಂಭಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳ ಪತ್ತೆ ಕಾರ್ಯವೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆಯನ್ನು ಖಂಡಿಸಿ ಬ್ರಿಮ್ಸ್ ಆಸ್ಪತ್ರೆಯ ಇತರ ವೈದ್ಯರು ಪ್ರತಿಭಟನೆಗೆ ಇಳಿದಿದ್ದಾರೆ. ಯುವ ವೈದ್ಯನ ಮೇಲೆ ನಡೆದ ಹಲ್ಲೆಗೆ ಆಕ್ರೋಶ ವ್ಯಕ್ತಪಡಿಸಿರುವ ವೈದ್ಯರು OPD ಹಾಗೂ ಕ್ಯಾಜುಲಿಟಿ ಸೇವೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಅಲ್ಲದೆ ಎಂಬಿಬಿಎಸ್ ಅಂತಿಮ ವರ್ಷದ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ನಡೆಸದಿರಲು ಕೂಡ ವೈದ್ಯರು ನಿರ್ಧರಿಸಿದ್ದಾರೆ.
ಬೆಳಿಗ್ಗೆ 10 ಗಂಟೆ ಸುಮಾರಿಗೆ ಬ್ರಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು, ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


















