ಮನೆ ಸುದ್ದಿ ಜಾಲ ಭಾರತ ಪ್ರವಾಸ ಆರಂಭಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ; ಕೋಲ್ಕತ್ತಾದಲ್ಲಿ ಭವ್ಯ ಸ್ವಾಗತ

ಭಾರತ ಪ್ರವಾಸ ಆರಂಭಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ; ಕೋಲ್ಕತ್ತಾದಲ್ಲಿ ಭವ್ಯ ಸ್ವಾಗತ

0

ಕೋಲ್ಕತಾ: ನಾಲ್ಕು ದಿನಗಳ ಅಧಿಕೃತ ರಾಜತಾಂತ್ರಿಕ ಪ್ರವಾಸದ ಭಾಗವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಶನಿವಾರ ಕೋಲ್ಕತ್ತಾಗೆ ಆಗಮಿಸಿದ್ದಾರೆ. ಇದು ಮಾರ್ಕೊ ರೂಬಿಯೋ ಅವರ ಮೊದಲ ಭಾರತ ಭೇಟಿ ಆಗಿದ್ದು, 2012ರ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯೊಬ್ಬರು ಕೋಲ್ಕತ್ತಾಗೆ ಭೇಟಿ ನೀಡುತ್ತಿರುವುದು ವಿಶೇಷವೆಂದು ಪರಿಗಣಿಸಲಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ಕೆಲವೇ ವಾರಗಳ ಬಳಿಕ ಅಮೆರಿಕದ ಉನ್ನತ ಮಟ್ಟದ ನಾಯಕನ ಭೇಟಿ ನಡೆಯುತ್ತಿರುವುದು ರಾಜತಾಂತ್ರಿಕವಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, “ಮಾರ್ಕೊ ರೂಬಿಯೋ ಕೋಲ್ಕತ್ತಾಗೆ ಆಗಮಿಸಿದ್ದಾರೆ. ಇದು ಅವರ ಮೊದಲ ಭಾರತ ಪ್ರವಾಸವಾಗಿದೆ. ಈ ಸಂದರ್ಭದಲ್ಲಿ ಅವರು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ವ್ಯಾಪಾರ, ತಂತ್ರಜ್ಞಾನ, ರಕ್ಷಣಾ ಸಹಕಾರ, ಕ್ವಾಡ್ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಮುಂದಿನ ದಿನಗಳಲ್ಲಿ ಚರ್ಚೆ ನಡೆಯಲಿದೆ” ಎಂದು ತಿಳಿಸಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ಮಾತನಾಡಿರುವ ಸೆರ್ಗಿಯೊ ಗೋರ್, “ಅಮೆರಿಕ ಅಧ್ಯಕ್ಷರ ದೃಷ್ಟಿಕೋನಕ್ಕೆ ಅನುಗುಣವಾಗಿ ಭಾರತ-ಅಮೆರಿಕ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಉದ್ದೇಶ ನಮ್ಮದಾಗಿದೆ. ಕ್ವಾಡ್ ವಿದೇಶಾಂಗ ಸಚಿವರ ಸಭೆ ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳು ಈ ಪ್ರವಾಸದ ಕಾರ್ಯಸೂಚಿಯಲ್ಲಿ ಸೇರಿವೆ” ಎಂದು ಹೇಳಿದ್ದಾರೆ.ಮಾರ್ಕೊ ರೂಬಿಯೋ ಅವರು ಕೋಲ್ಕತ್ತಾದ ಕೇಂದ್ರ ಭಾಗದಲ್ಲಿರುವ ಮದರ್ ಹೌಸ್ ಗೆ ಭೇಟಿ ನೀಡಿ, ಸಂತ ಮದರ್ ತೆರೇಸಾ ಸ್ಥಾಪಿಸಿದ್ದ ಮಿಷನರೀಸ್ ಆಫ್ ಚಾರಿಟಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಜೊತೆಗೆ ನಗರದ ಮಕ್ಕಳ ಆಶ್ರಯ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಮೇ 23ರಿಂದ ಮೇ 26ರವರೆಗೆ ನಡೆಯಲಿರುವ ಈ ಭಾರತ ಪ್ರವಾಸದ ಅವಧಿಯಲ್ಲಿ ಮಾರ್ಕೊ ರೂಬಿಯೋ ಆಗ್ರಾ, ಜೈಪುರ ಹಾಗೂ ನವದೆಹಲಿ ನಗರಗಳಿಗೂ ಭೇಟಿ ನೀಡಲಿದ್ದಾರೆ.ಭಾರತದೊಂದಿಗೆ ಇಂಧನ ಸಹಕಾರ ವಿಸ್ತರಣೆ ಹಾಗೂ ಕ್ವಾಡ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಹಿನ್ನೆಲೆ ಈ ಪ್ರವಾಸಕ್ಕೆ ಹೆಚ್ಚಿನ ಮಹತ್ವ ಲಭಿಸಿದೆ.ಭಾರತ ಪ್ರವಾಸಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಾರ್ಕೊ ರೂಬಿಯೋ, “ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇಂಧನ ರಫ್ತು ಮಾಡಲು ಅಮೆರಿಕ ಆಸಕ್ತಿ ಹೊಂದಿದೆ. ಭಾರತ ನಮ್ಮ ಪ್ರಮುಖ ಪಾಲುದಾರ ರಾಷ್ಟ್ರವಾಗಿದ್ದು, ಅಮೆರಿಕದ ಇಂಧನ ಉತ್ಪಾದನೆ ಮತ್ತು ರಫ್ತು ಐತಿಹಾಸಿಕ ಮಟ್ಟ ತಲುಪಿದೆ” ಎಂದು ತಿಳಿಸಿದ್ದರು.ಮೇ 26ರಂದು ನಡೆಯಲಿರುವ ಕ್ವಾಡ್ ರಾಷ್ಟ್ರಗಳ ಸಭೆಯಲ್ಲಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್, ಜಪಾನ್ ವಿದೇಶಾಂಗ ಸಚಿವ ಮೊಟೆಗಿ ತೋಶಿಮಿಟ್ಸು ಹಾಗೂ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಲಿದ್ದಾರೆ.