ನವದೆಹಲಿ: ದೇಶದಲ್ಲಿ ತೈಲ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.
ಆಡಳಿತ ಪಕ್ಷವು ಸಾಮಾನ್ಯ ಜನರ ಕಷ್ಟಪಟ್ಟು ಗಳಿಸಿದ ಹಣವನ್ನು “ಕಂತುಗಳಲ್ಲಿ ದೋಚುತ್ತಿದೆ” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಶನಿವಾರ ಮತ್ತೆ ಲೀಟರ್‌ಗೆ 91 ಪೈಸೆವರೆಗೆ ಏರಿಕೆಯಾಗಿದೆ. ಇದು ಕಳೆದ 10 ದಿನಗಳ ಅವಧಿಯಲ್ಲಿ ನಡೆದ ಮೂರನೇ ಬಾರಿ ಇಂಧನ ಬೆಲೆ ಏರಿಕೆಯಾಗಿದೆ.
ಈ ದರ ಏರಿಕೆಗೆ ಪ್ರತಿಕ್ರಿಯಿಸಿದ ಖರ್ಗೆ ಅವರು, ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಬಹಳಷ್ಟು ಇಳಿಕೆಯಾಗಿದ್ದರೂ, ಅದರ ಲಾಭವನ್ನು ಕೇಂದ್ರ ಸರ್ಕಾರ ದೇಶದ ಜನರಿಗೆ ನೀಡದೆ ವಂಚಿಸಿದೆ ಎಂದು ಹೇಳಿದ್ದಾರೆ.ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ದೀರ್ಘ ಸಂದೇಶ ಹಂಚಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಫಲ್ಯವೇ ಈ ಸ್ಥಿತಿಗೆ ಕಾರಣವಾಗಿದೆ ಎಂದು ಟೀಕಿಸಿದ್ದಾರೆ.
ಪೆಟ್ರೋಲ್ ಬೆಲೆ ಮತ್ತೆ 100 ರೂಪಾಯಿ ಮಟ್ಟವನ್ನು ದಾಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿದಿನ ಸುಮಾರು 1,000 ಕೋಟಿ ರೂಪಾಯಿ ಕೇಂದ್ರ ತೆರಿಗೆ ವಿಧಿಸಲಾಗುತ್ತಿದೆ, ಆದರೂ ಸರ್ಕಾರದ ಲಾಲಸೆ ಕಡಿಮೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಜಾಗತಿಕವಾಗಿ ತೈಲ ಬೆಲೆಗಳು ಕಡಿಮೆ ಇದ್ದಾಗ ಜನರಿಗೆ ಯಾವುದೇ ರೀತಿಯ ರಿಯಾಯಿತಿ ನೀಡಲಾಗಲಿಲ್ಲ. ಬದಲಾಗಿ ನಿರಂತರವಾಗಿ ತೆರಿಗೆ ಮೂಲಕ ಜನರನ್ನು ಒತ್ತಡಕ್ಕೆ ಒಳಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈಗ ಸಂಕಷ್ಟದ ಸಂದರ್ಭದಲ್ಲಿ ಚುನಾವಣೆಗಳಲ್ಲಿ ತೊಡಗಿಸಿಕೊಂಡು, ನಂತರ ಜನರಿಗೆ ತ್ಯಾಗದ ಪಾಠ ಹೇಳಲಾಗುತ್ತಿದೆ ಎಂದು ಖರ್ಗೆ ಕಿಡಿಕಾರಿದ್ದಾರೆ.ಭಾರತದಲ್ಲಿ ಇಂಧನ ದರಗಳು ವಿದೇಶಗಳಿಗಿಂತ ಕಡಿಮೆ ಇವೆ ಎಂಬ ಕೇಂದ್ರ ಸರ್ಕಾರದ ವಾದವನ್ನು ಕೂಡ ಖರ್ಗೆ ತಳ್ಳಿ ಹಾಕಿದ್ದಾರೆ.


















