ರಾಜಮಹೇಂದ್ರವರಂ: ನೆರೆಯ ತಮಿಳುನಾಡಿನಲ್ಲಿ ನಟ ವಿಜಯ್ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಆಂಧ್ರ ಪ್ರದೇಶದ ಜನ ಸೇನಾ ಪಕ್ಷ (JSP) ಮುಖ್ಯಸ್ಥ ಹಾಗೂ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ರಾಜಕೀಯವಾಗಿ ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ.
ಪಕ್ಷ ಸಂಘಟನೆ ಬಲಪಡಿಸುವ ಉದ್ದೇಶದಿಂದ ಅವರು ಹೊಸ ಕಾರ್ಯತಂತ್ರವನ್ನು ರೂಪಿಸುತ್ತಿದ್ದು, ಸೋಮವಾರ ಸಂಜೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸಂದೇಶ ನೀಡಿದ್ದಾರೆ. ಪಕ್ಷದ ಶಿಸ್ತು ಮತ್ತು ನಾಯಕತ್ವ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಯಾವುದೇ ನಾಯಕರು ಅಥವಾ ಕಾರ್ಯಕರ್ತರು ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಪಕ್ಷದ ಮಾರ್ಗದರ್ಶನವನ್ನು ಅನುಸರಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾದೇಂಡ್ಲಾ ಮನೋಹರ್ ಅವರ ನಿರ್ದೇಶನಗಳನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದ್ದಾರೆ.
“ಇಂದಿನಿಂದ ಎಲ್ಲರೂ ನನ್ನ ಆದೇಶಗಳನ್ನು ಪಾಲಿಸಬೇಕು. ನಾನು ಪಕ್ಷದ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಮುಂದುವರೆದು, “ನಾನು ಕಮಾಂಡರ್. ಇನ್ನು ಮುಂದೆ ನನ್ನನ್ನು ಪ್ರಶ್ನಿಸಬೇಡಿ. ಪಕ್ಷದಲ್ಲಿ ಮುಂದುವರಿಯಲು ಬಯಸಿದರೆ ನನ್ನ ಆದೇಶಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಪಕ್ಷವನ್ನು ತೊರೆಯಬಹುದು. ಶಿಸ್ತನ್ನು ಪಾಲಿಸದವರು ಸ್ವತಂತ್ರವಾಗಿ ಹೊರಹೋಗಬಹುದು” ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ವಿಶೇಷವಾಗಿ ರಾಜಕೀಯ ವಿಶ್ಲೇಷಕ ಮತ್ತು ಮಾಜಿ ಎಂಎಲ್ಸಿ ಪ್ರೊ. ನಾಗೇಶ್ವರ್ ಅವರು ವೈ ಎಸ್ ಜಗನ್ ಮೋಹನ್ ರೆಡ್ಡಿ ಬಂಧನದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.ತಮ್ಮ ಮತ್ತು ಅಮಿತ್ ಶಾ ನಡುವಿನ ಚರ್ಚೆಗಳು ಕೇವಲ ಆಂಧ್ರ ಪ್ರದೇಶದ ಅಭಿವೃದ್ಧಿ ಮತ್ತು ರಾಜ್ಯದ ಪ್ರಗತಿ ಸಂಬಂಧಿತ ವಿಷಯಗಳ ಮೇಲೆ ಮಾತ್ರ ಕೇಂದ್ರೀಕೃತವಾಗಿದ್ದವು ಎಂದು ಅವರು ಸ್ಪಷ್ಟಪಡಿಸಿದ್ದಾರೆ.


















