ಮನೆ ಸುದ್ದಿ ಜಾಲ CNG Price Hike: ಮತ್ತೆ ಏರಿದ CNG  ದರ, ಕೆಜಿಗೆ ₹2 ಹೆಚ್ಚಳ; ವಾಹನ ಸವಾರರಿಗೆ...

CNG Price Hike: ಮತ್ತೆ ಏರಿದ CNG  ದರ, ಕೆಜಿಗೆ ₹2 ಹೆಚ್ಚಳ; ವಾಹನ ಸವಾರರಿಗೆ ಹೆಚ್ಚಿದ ಹೊರೆ

0

ನವದೆಹಲಿ: ಸಿಎನ್‌ಜಿ  ಬಳಕೆ ಮಾಡುವವರಿಗೆ ಮತ್ತೊಮ್ಮೆ ದರ ಏರಿಕೆಯ ಶಾಕ್ ಎದುರಾಗಿದೆ. ಮೇ 26ರ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ ಸಂಕುಚಿತ ನೈಸರ್ಗಿಕ ಅನಿಲದ (Compressed Natural Gas) ದರವನ್ನು ಪ್ರತಿ ಕೆಜಿಗೆ ₹2 ಹೆಚ್ಚಿಸಲಾಗಿದೆ.

ಹೊಸ ದರ ಪರಿಷ್ಕರಣೆಯ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಎನ್‌ಜಿ  ದರವು ಪ್ರತಿ ಕೆಜಿಗೆ ₹83.09ಕ್ಕೆ ತಲುಪಿದೆ. ಕಳೆದ ಎರಡು ವಾರಗಳ ಅವಧಿಯಲ್ಲಿ ಇದು ನಾಲ್ಕನೇ ಬಾರಿ ನಡೆದಿರುವ ಬೆಲೆ ಏರಿಕೆಯಾಗಿದ್ದು, ಮೇ 15ರಿಂದ ಇದುವರೆಗೆ ಒಟ್ಟು ₹5 ಹೆಚ್ಚಳ ದಾಖಲಾಗಿದೆ.ಸಿಎನ್‌ಜಿ  ಪೂರೈಕೆ ಮಾಡುವ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಸಂಸ್ಥೆ ಜಾಗತಿಕ ಇಂಧನ ವೆಚ್ಚ ಏರಿಕೆಯ ಪರಿಣಾಮವನ್ನು ಗ್ರಾಹಕರ ಮೇಲೆ ವರ್ಗಾಯಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮೇ 15ರಂದು ₹2, ಮೇ 17ರಂದು ₹1, ಮೇ 23ರಂದು ₹1 ಹಾಗೂ ಇದೀಗ ಮೇ 26ರಂದು ಮತ್ತೆ ₹2 ಹೆಚ್ಚಳ ಮಾಡಲಾಗಿದೆ. ಕೇವಲ 11 ದಿನಗಳೊಳಗೆ ನಾಲ್ಕು ಬಾರಿ ದರ ಪರಿಷ್ಕರಣೆ ನಡೆದಿರುವುದು ವಾಹನ ಸವಾರರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.ತಾಜಾ ದರಗಳ ಪ್ರಕಾರ, ದೆಹಲಿಯಲ್ಲಿ ಸಿಎನ್‌ಜಿ  ದರ ₹83.09 ಆಗಿದ್ದರೆ, ನೋಯ್ಡಾ, ಗ್ರೇಟರ್ ನೋಯ್ಡಾ ಹಾಗೂ ಗಾಜಿಯಾಬಾದ್ ಪ್ರದೇಶಗಳಲ್ಲಿ ₹88.70ಕ್ಕೆ ಏರಿಕೆಯಾಗಿದೆ. ಗುರುಗ್ರಾಮದಲ್ಲಿ ಪ್ರತಿ ಕೆಜಿಗೆ ₹86.12 ನಿಗದಿಯಾಗಿದ್ದು, ಮುಂಬೈನಲ್ಲಿ ಸಿಎನ್‌ಜಿ  ದರ ₹84 ಪ್ರತಿ ಕೆಜಿಯಾಗಿದೆ.

ಸಿಎನ್‌ಜಿ  ಮಾತ್ರವಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲೂ ಇತ್ತೀಚಿನ ದಿನಗಳಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಈಗಾಗಲೇ ₹100 ಗಡಿ ದಾಟಿದ್ದು, ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯ ಅಸ್ಥಿರತೆ ಮತ್ತು ಇಂಧನ ಪೂರೈಕೆ ಕುರಿತ ಆತಂಕಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ.ಉದ್ಯಮ ವಲಯದ ವರದಿಗಳ ಪ್ರಕಾರ, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಜಾಗತಿಕ ತೈಲ ಸಾಗಣೆಗೆ ಪ್ರಮುಖವಾಗಿರುವ ಹೋರ್ಮುಜ್ ಜಲಸಂಧಿಯಲ್ಲಿ ಪೂರೈಕೆ ವ್ಯತ್ಯಯ ಉಂಟಾಗುವ ಭೀತಿ ಹೆಚ್ಚಾಗಿದೆ.

ಜಾಗತಿಕ ತೈಲ ಮತ್ತು ಅನಿಲ ವ್ಯಾಪಾರದ ಸುಮಾರು 20 ಶೇಕಡಾ ಈ ಮಾರ್ಗದ ಮೂಲಕ ಸಾಗುತ್ತದೆ. ಉದ್ವಿಗ್ನತೆ ತೀವ್ರಗೊಳ್ಳುವ ಮೊದಲು ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 70ರಿಂದ 72 ಡಾಲರ್ ಮಟ್ಟದಲ್ಲಿದ್ದರೆ, ನಂತರ ಅದು 120 ಡಾಲರ್ ಗಡಿ ದಾಟಿತ್ತು. ಪ್ರಸ್ತುತ ಕಚ್ಚಾ ತೈಲದ ಬೆಲೆ 104ರಿಂದ 110 ಡಾಲರ್ ನಡುವಿನ ಮಟ್ಟದಲ್ಲಿ ವಹಿವಾಟಾಗುತ್ತಿದೆ.

ಭಾರತ ತನ್ನ ಒಟ್ಟು ಕಚ್ಚಾ ತೈಲ ಅಗತ್ಯದ ಸುಮಾರು 90 ಶೇಕಡಾವನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಜಾಗತಿಕ ಮಾರುಕಟ್ಟೆಯ ಬೆಲೆ ಏರಿಳಿತಗಳು ದೇಶದ ಮೇಲೆ ನೇರ ಪರಿಣಾಮ ಬೀರುತ್ತಿವೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತದ ಕಚ್ಚಾ ತೈಲ ಸರಾಸರಿ ಬೆಲೆ ಪ್ರತಿ ಬ್ಯಾರೆಲ್ ಗೆ 113ರಿಂದ 114 ಡಾಲರ್ ಮಟ್ಟದಲ್ಲಿದ್ದು, ವರ್ಷದ ಆರಂಭದಲ್ಲಿ ಇದು ಸುಮಾರು 69 ಡಾಲರ್ ಇತ್ತು.ಇದರಿಂದ ತೈಲ ಮಾರುಕಟ್ಟೆ ಕಂಪನಿಗಳ ಮೇಲಿನ ಆರ್ಥಿಕ ಒತ್ತಡ ಹೆಚ್ಚಾಗಿದ್ದು, ಇಂಧನ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದೆ.ಸತತ ದರ ಏರಿಕೆಯಿಂದ ಸಿಎನ್‌ಜಿ  ಬಳಸುವ ಟ್ಯಾಕ್ಸಿ ಚಾಲಕರು, ವಾಣಿಜ್ಯ ವಾಹನ ಚಾಲಕರು ಹಾಗೂ ಪ್ರತಿದಿನ ಪ್ರಯಾಣ  ಮಾಡುವ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಗೆ ಹೋಲಿಸಿದರೆ ಕಡಿಮೆ ವೆಚ್ಚದ ಪರ್ಯಾಯವೆಂದು ಪರಿಗಣಿಸಲ್ಪಟ್ಟಿದ್ದ  ಸಿಎನ್‌ಜಿ ಯ ಆರ್ಥಿಕ ಲಾಭವೂ ಈಗ ನಿಧಾನವಾಗಿ ಕಡಿಮೆಯಾಗುತ್ತಿದೆ.