ಬೆಂಗಳೂರು : ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಮತ್ತು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಇದೀಗ ತಂತ್ರಜ್ಞಾನ ಆಧಾರಿತ ಭಾರಿ ಬದಲಾವಣೆಯೊಂದನ್ನು ತರಲು ಸರ್ಕಾರ ಸಜ್ಜಾಗಿದೆ. ಪ್ರತಿ ತಿಂಗಳು ಮನೆಯ ಯಜಮಾನಿಯ ಖಾತೆಗೆ 2,000 ರೂ. ಜಮೆ ಮಾಡುವ ಈ ಯೋಜನೆಯು ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸಿದೆ. ಇತ್ತೀಚಿನ ದಿನಗಳಲ್ಲಿ ಯೋಜನೆಯ ದುರ್ಬಳಕೆ ಹಾಗೂ ಅನರ್ಹರಿಗೂ ಹಣ ಸಂದಾಯವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಸರ್ಕಾರ ಎಚ್ಚೆತ್ತುಕೊಂಡಿದೆ. ಅನರ್ಹರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇನ್ಮುಂದೆ ‘ಒನ್-ಟೈಮ್ ಬಯೋಮೆಟ್ರಿಕ್’ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಯೋಜನೆಯ ಲಾಭ ಪಡೆಯುತ್ತಿರುವ ಪ್ರತಿಯೊಬ್ಬ ಫಲಾನುಭವಿಯೂ ತಮ್ಮ ಖಾತೆಯನ್ನು ಬಯೋಮೆಟ್ರಿಕ್ ಹಾಗೂ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯೊಂದಿಗೆ ಮರು ನೋಂದಣಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಈ ನವೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಅಂತವರ ಬ್ಯಾಂಕ್ ಖಾತೆಗೆ ಮುಂದಿನ ತಿಂಗಳಿನಿಂದ ಹಣ ಜಮೆಯಾಗುವುದಿಲ್ಲ ಎಂದು ಎಚ್ಚರಿಸಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರವು ಶೀಘ್ರದಲ್ಲೇ ಅಧಿಕೃತ ಮಾರ್ಗಸೂಚಿ ಹಾಗೂ ಆದೇಶವನ್ನು ಹೊರಡಿಸುವ ನಿರೀಕ್ಷೆಯಿದೆ.
ಬಯೋಮೆಟ್ರಿಕ್ ವ್ಯವಸ್ಥೆ ತರಲು ಕಾರಣವೇನು? – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಲೋಪಗಳು ಕಂಡುಬಂದಿವೆ. ಯೋಜನೆಯ ಲಕ್ಷಾಂತರ ಮಂದಿ ಫಲಾನುಭವಿಗಳು ಈಗಾಗಲೇ ನಿಧನರಾಗಿದ್ದರೂ, ಅವರ ಖಾತೆಗೆ ಸದ್ದಿಲ್ಲದೆ ಹಣ ಜಮೆಯಾಗುತ್ತಿದೆ. ಸರ್ಕಾರದ ದತ್ತಾಂಶಗಳ ಪ್ರಕಾರ ಸುಮಾರು ಎರಡು ಲಕ್ಷ ಮಂದಿ ಮೃತಪಟ್ಟಿದ್ದರೂ ಅವರ ಹೆಸರಿನಲ್ಲಿ ಪ್ರತಿ ತಿಂಗಳು ಹಣ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ, 50 ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ ಪಾವತಿದಾರರು ಕಾನೂನುಬಾಹಿರವಾಗಿ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂಬುದು ಪತ್ತೆಯಾಗಿದೆ.
ಇದಲ್ಲದೆ, ಕೆಲವು ಅರ್ಹ ಫಲಾನುಭವಿಗಳ ಖಾತೆಗೆ ಜಮೆಯಾಗುವ ಗೃಹಲಕ್ಷ್ಮಿ ಹಣವು ಅವರು ಈ ಹಿಂದೆ ಮಾಡಿದ್ದ ಬ್ಯಾಂಕ್ ಸಾಲಕ್ಕೆ ನೇರವಾಗಿ ಕಡಿತಗೊಳ್ಳುತ್ತಿದೆ. ಇನ್ನೂ ಕೆಲವರ ಮೊಬೈಲ್ ಸಂಖ್ಯೆಗಳು ಬದಲಾಗಿರುವುದರಿಂದ ಅವರಿಗೆ ಮಾಹಿತಿಯೇ ತಲುಪುತ್ತಿಲ್ಲ. ಈ ಎಲ್ಲಾ ಗೊಂದಲಗಳನ್ನು ನಿವಾರಿಸಿ, ಕೇವಲ ನೈಜ ಹಾಗೂ ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಲಾಭ ಸಿಗುವಂತೆ ಮಾಡಲು ಗೃಹಲಕ್ಷ್ಮಿ ಯೋಜನೆಯ ಖಾತೆಗಳನ್ನು ಸಮಗ್ರವಾಗಿ ಮತ್ತೊಮ್ಮೆ ನವೀಕರಣ ಮಾಡಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಮೃತಪಟ್ಟವರ ಖಾತೆಗೆ ಹಣ ಹೋಗುತ್ತಿರುವುದನ್ನು ತಡೆಯಲು ಈ ಮೊದಲು ಫಲಾನುಭವಿಗಳು ಬದುಕಿರುವ ಬಗ್ಗೆ ‘ಜೀವಿತ ಪ್ರಮಾಣ ಪತ್ರ’ ಸಲ್ಲಿಸುವಂತೆ ಸೂಚಿಸಲು ನಿರ್ಧರಿಸಲಾಗಿತ್ತು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಪರ್ಯಾಯವಾಗಿ ಈ ಸರಳವಾದ ‘ಬಯೋಮೆಟ್ರಿಕ್’ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ನವೀಕರಣ ಪ್ರಕ್ರಿಯೆ ಹೇಗೆ ನಡೆಯಲಿದೆ? – ಫಲಾನುಭವಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ತಮ್ಮ ಹತ್ತಿರದ ಬೆಂಗಳೂರು ಒನ್ , ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಪ್ರಸ್ತುತ ಚಾಲ್ತಿಯಲ್ಲಿರುವ ತಮ್ಮ ಮೊಬೈಲ್ ಸಂಖ್ಯೆಯನ್ನು ಒದಗಿಸಿ, ಬೆರಳಚ್ಚು ನೀಡುವ ಮೂಲಕ ತಮ್ಮ ಖಾತೆಯನ್ನು ಸುಲಭವಾಗಿ ಮರು-ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.
ಅನರ್ಹರಿಗೆ ಗೃಹಲಕ್ಷ್ಮಿ ಕಟ್ – ಫಲಾನುಭವಿಗಳು ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಹೊಂದಿರಬಹುದು. ಆದರೆ, ಅವರು ಯಾವುದೇ ಕಾರಣಕ್ಕೂ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಆಹಾರ ಇಲಾಖೆಯು ಇತ್ತೀಚೆಗೆ ನಡೆಸಿದ ಪರಿಶೀಲನೆಯಲ್ಲಿ ಆದಾಯ ತೆರಿಗೆ ಪಾವತಿಸುತ್ತಿದ್ದ ಸುಮಾರು 2 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ಗೆ ವರ್ಗಾವಣೆ ಮಾಡಿದೆ. ನಿಯಮ ಉಲ್ಲಂಘಿಸಿರುವ ಈ ಆದಾಯ ತೆರಿಗೆ ಪಾವತಿದಾರರಿಗೆ ತಕ್ಷಣದಿಂದಲೇ ಗೃಹಲಕ್ಷ್ಮಿ ಯೋಜನೆಯ ರದ್ದಾಗಲಿದೆ. ಇಲಾಖೆಯು ಯಾವುದೇ ಫಲಾನುಭವಿಯ ಹೆಸರನ್ನು ಏಕಾಏಕಿ ಡಿಲೀಟ್ ಮಾಡುತ್ತಿಲ್ಲ. ಮಹಿಳೆಯರು ಕೇವಲ ಒಂದು ಬಾರಿ ಬಯೋಮೆಟ್ರಿಕ್ ನೀಡಿದರೆ ಸಾಕು. ನವೀಕರಣ ಮಾಡದ ಖಾತೆಗಳು ಮಾತ್ರ ಸ್ವಯಂಚಾಲಿತವಾಗಿ ರದ್ದಾಗುತ್ತವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.


















