ಮನೆ ರಾಷ್ಟ್ರೀಯ ಸುವೇಂದು ಖಡಕ್ ಆಕ್ಷನ್ ಬೆನ್ನಲ್ಲೇ, ಸ್ವದೇಶಕ್ಕೆ ಓಡುತ್ತಿದ್ದಾರೆ – ಅಕ್ರಮ ಬಾಂಗ್ಲಾ ಪ್ರಜೆಗಳು..!

ಸುವೇಂದು ಖಡಕ್ ಆಕ್ಷನ್ ಬೆನ್ನಲ್ಲೇ, ಸ್ವದೇಶಕ್ಕೆ ಓಡುತ್ತಿದ್ದಾರೆ – ಅಕ್ರಮ ಬಾಂಗ್ಲಾ ಪ್ರಜೆಗಳು..!

0

ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಕ್ರಮ ನುಸುಳುಕೋರರ ವಿರುದ್ಧ ಬಿಗಿ ಆಕ್ಷನ್ ಆರಂಭವಾಗಿದೆ. ಉತ್ತರ 24 ಪರಗಣ ಜಿಲ್ಲೆಯ ಹಕಿಂಪೂರ್ ಗಡಿ ಜಾಗದಲ್ಲಿ ಅಕ್ರಮ ಬಾಂಗ್ಲಾದೇಶಿ ನಿವಾಸಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದು, ಸ್ವದೇಶಕ್ಕೆ ಮರಳಲು ಯತ್ನಿಸುತ್ತಿದ್ದಾರೆ.

ಹಕಿಂಪೂರ್ ಗಡಿ ತಪಾಸಣಾ ಕೇಂದ್ರದ ಬಳಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಅಕ್ರಮ ಬಾಂಗ್ಲಾ ವಲಸಿಗರು ತಂಗಿದ್ದು, ಗಡಿ ದಾಟಲು ಗಡಿ ಭದ್ರತಾ ಪಡೆಯ ಅನುಮತಿಗಾಗಿ ಕಾಯುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಜಾರಿಗೆ ಬಂದಿರುವ ನೂತನ ಸರ್ಕಾರದ “ಡಿಟೆಕ್ಟ್, ಡಿಲೀಟ್ ಮತ್ತು ಡಿಪೋರ್ಟ್” (ಪತ್ತೆಹಚ್ಚಿ, ತೆಗೆದುಹಾಕಿ ಮತ್ತು ಗಡಿಪಾರು ಮಾಡಿ) ನೀತಿಯಿಂದಾಗಿ ವಲಸಿಗರಲ್ಲಿ ಬಂಧನದ ಭೀತಿ ಎದುರಾಗಿದೆ.

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, ರಾಜ್ಯದಲ್ಲಿ ಸಿಕ್ಕಿಬೀಳುವ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಬದಲು ನೇರವಾಗಿ ಗಡಿ ಭದ್ರತಾ ಪಡೆಗೆ ಹಸ್ತಾಂತರಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಮೇ 20 ರಿಂದಲೇ ಈ ಆದೇಶ ಜಾರಿಯಾಗಿದ್ದು, ಅಕ್ರಮ ವಲಸಿಗರನ್ನು ಬಂಧಿಸಿಡಲು ರಾಜ್ಯದ ಎಲ್ಲಾ 23 ಜಿಲ್ಲೆಗಳಲ್ಲೂ ಗೃಹ ಇಲಾಖೆಯು ಹೋಲ್ಡಿಂಗ್ ಸೆಂಟರ್‌ಗಳನ್ನು ಸ್ಥಾಪಿಸಲು ಸರ್ಕಾರ ಸೂಚಿಸಿದೆ.

ಭಾರತೀಯ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಿಂದಾಗಿ, ನಕಲಿ ದಾಖಲೆ ಹೊಂದಿರುವವರು ಸಿಕ್ಕಿಬೀಳುವ ಭಯದಿಂದ ಸ್ವಯಂಪ್ರೇರಿತರಾಗಿ ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆ ಎಂದು ವರದಿಯಾಗಿದೆ. ಗಡಿಯಲ್ಲಿ ಸಿಕ್ಕಿಬಿದ್ದಿರುವ ಬಹುತೇಕರು ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಉಪನಗರಗಳಲ್ಲಿ ದಿನಗೂಲಿ ನೌಕರರಾಗಿ, ಗೃಹ ಕಾರ್ಮಿಕರಾಗಿ ಹಾಗೂ ಕಟ್ಟಡ ಕಾರ್ಮಿಕರಾಗಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ.

ಪ್ರಸ್ತುತ ಬಿಎಸ್ಎಫ್ ಅಧಿಕಾರಿಗಳು ಇವರ ಬಯೋಮೆಟ್ರಿಕ್ ಡೇಟಾ ಮತ್ತು ಗುರುತನ್ನು ಪರಿಶೀಲಿಸುತ್ತಿದ್ದು, ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ಚರ್ಚಿಸಿ ಸುರಕ್ಷಿತವಾಗಿ ಗಡಿಪಾರು ಮಾಡುವ ಪ್ರಕ್ರಿಯೆ ನಡೆಸುತ್ತಿದ್ದಾರೆ. ರೈಲ್ವೆ ನಿಲ್ದಾಣ ಅಥವಾ ರಾಜ್ಯದ ಯಾವುದೇ ಭಾಗದಲ್ಲಿ ಅಕ್ರಮ ವಲಸಿಗರು ಸಿಕ್ಕಿಬಿದ್ದರೆ, ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ದು ಕಾನೂನು ಪ್ರಕ್ರಿಯೆಗಳನ್ನು ವಿಳಂಬ ಮಾಡುವ ಅಗತ್ಯವಿಲ್ಲ. ಬಂಧಿತ ವಲಸಿಗರಿಗೆ ಸೂಕ್ತ ಆಹಾರ ಮತ್ತು ಆರೈಕೆ ನೀಡಿದ ತಕ್ಷಣವೇ ಅವರನ್ನು ಗಡಿಯಲ್ಲಿರುವ ಬಿಎಸ್‌ಎಫ್ ಔಟ್‌ಪೋಸ್ಟ್‌ಗಳಿಗೆ ತಲುಪಿಸಬೇಕು.

ಅಲ್ಲಿಂದ ಅವರನ್ನು ನೇರವಾಗಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಬೇಕು. ರಾಜ್ಯ ಪೊಲೀಸ್ ಕಮಿಷನರ್ ಹಾಗೂ ರೈಲ್ವೆ ರಕ್ಷಣಾ ಪಡೆಗೆ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ವಾರಕ್ಕೊಮ್ಮೆ ಇದರ ವರದಿಯನ್ನು ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಲು ಆದೇಶಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಭಾರತೀಯ ಪೌರತ್ವ ಪಡೆಯಲು ಅರ್ಹರಲ್ಲದ ಮತ್ತು ಕಾನೂನುಬಾಹಿರವಾಗಿ ದೇಶದೊಳಗೆ ನುಸುಳಿರುವ ಪ್ರತಿಯೊಬ್ಬ ಬಾಂಗ್ಲಾದೇಶಿ ಪ್ರಜೆಗೂ ಈ ನಿಯಮ ಅನ್ವಯಿಸುತ್ತದೆ.