ಮೆಕ್ಕಾ, ಸೌದಿ ಅರೆಬಿಯಾ: ಲಕ್ಷಾಂತರ ಯಾತ್ರಿಕರು ವಾರ್ಷಿಕ ಹಜ್ 2026 ತೀರ್ಥಯಾತ್ರೆ ಆರಂಭಿಸಲು ಸೋಮವಾರ ಮಿನಾ ನಗರಕ್ಕೆ ತಮ್ಮ ಪ್ರಯಾಣ ಪ್ರಾರಂಭಿಸಿದ್ದಾರೆ. ವಾರ್ಷಿಕ ತೀರ್ಥಯಾತ್ರೆಯಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತ 1.5 ಮಿಲಿಯನ್ಗಿಂತಲೂ ಹೆಚ್ಚು ಯಾತ್ರಿಕರು ಆಗಮಿಸಿದ್ದು ಸೋಮವಾರ ಮಧ್ಯಾಹ್ನದಿಂದ ಕಡ್ಡಾಯ ವಾಸ್ತವ್ಯ ಮತ್ತು ನಿರ್ದಿಷ್ಟ ಪ್ರಾರ್ಥನೆಗಳನ್ನು ನಡೆಸುವುದರಿಂದ ಈ ಯಾತ್ರಿಕರಲ್ಲಿ ಹೆಚ್ಚಿನ ಸಂಖ್ಯೆಯವರು ಭಾನುವಾರ ಸಂಜೆಯೇ ಟೆಂಟ್ ಸಿಟಿಯ ಕಡೆಗೆ ನಡೆಯಲು ಪ್ರಾರಂಭಿಸಿದ್ದಾರೆ. ಹಜ್ ತೀರ್ಥಯಾತ್ರೆಯು ಅಧಿಕೃತವಾಗಿ ಆರಂಭವಾಗುವ ಯವ್ಮ್ ಅಲ್-ತರ್ವಿಯಾದಲ್ಲಿ ಸೌದಿ ಅರೇಬಿಯಾ ಮತ್ತು ನೆರೆಯ ಗಲ್ಫ್ ದೇಶಗಳಿಂದ ಸುಮಾರು ಐದು ಲಕ್ಷ ದೇಶೀಯ ಯಾತ್ರಿಕರು ಸೇರುತ್ತಾರೆ. ಭಾನುವಾರ ಮಸ್ಜಿದ್ ಅಲ್-ಹರಾಮ್ ಒಳಗೆ ಜನರು ಮಿನಾ ಕಣಿವೆಗೆ ಪ್ರಯಾಣ ಬೆಳೆಸುವ ಮೊದಲು ಮಗ್ರಿಬ್ ಮತ್ತು ಇಶಾ ಪ್ರಾರ್ಥನೆಗಳನ್ನು ಸಲ್ಲಿಸಿದರು ಎನ್ನಲಾಗುತ್ತಿದೆ.
ಡೇರೆ ನಗರಕ್ಕೆ ಯಾತ್ರಿಕರನ್ನು ಸಾಗಿಸಲು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಮೆಕ್ಕಾದ ಅಧಿಕಾರಿಗಳು ಹೇಳಿದ್ದಾರೆ. ಯಾತ್ರಿಕರು ನಿಗದಿತ ಸ್ಥಳವನ್ನು ತಲುಪಲು ಯಾವುದೇ ತೊಂದರೆಯಿಲ್ಲದೇ ಸಾಗುವುದನ್ನು ಖಚಿತಪಡಿಸಿಕೊಳ್ಳಲು ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪವಿತ್ರ ತೀರ್ಥಯಾತ್ರೆಯ ಕಡ್ಡಾಯ ಆಚರಣೆಗಳನ್ನು ಪೂರ್ಣಗೊಳಿಸಲು ಯಾತ್ರಿಕರು ಮುಂದಿನ ದಿನಗಳಲ್ಲಿ ಅರಾಫತ್ ಮತ್ತು ಮುಜ್ದಲಿಫಾ ಕಡೆಗೆ ಮೆರವಣಿಗೆ ನಡೆಸಲಿದ್ದಾರೆ. ಪವಿತ್ರ ನಗರದ ಭದ್ರತೆಗಾಗಿ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶಿಷ್ಟ ಸಮವಸ್ತ್ರಗಳನ್ನು ಧರಿಸಿ ಮತ್ತು ಗ್ಯಾಜೆಟ್ಗಳನ್ನು ಹೊಂದಿದ ಭದ್ರತಾ ಸಿಬ್ಬಂದಿ ಹಾಗೂ ಸ್ವಯಂಸೇವಕರು ಯಾತ್ರಿಕರ ಹಾದಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ವಿಶೇಷವಾಗಿ ಮಹಿಳಾ ಯಾತ್ರಿಕರಿಗೆ ಮಾರ್ಗದರ್ಶನ ಮತ್ತು ಸಹಾಯ ಮಾಡಲು ಗಣನೀಯ ಸಂಖ್ಯೆಯ ಯುವತಿಯರನ್ನು ಸಹ ನೇಮಿಸಲಾಗಿದೆ. ಹಜ್ ಮತ್ತು ಉಮ್ರಾ ಸಚಿವಾಲಯದ ಅಧಿಕಾರಿಗಳು ಮಿನಾದೊಳಗಿನ ವಸತಿ, ಅಡುಗೆ ಮತ್ತು ಸಾರಿಗೆ ಸೇವೆಗಳ ಕಾರ್ಯಾಚರಣೆಯ ಸಿದ್ಧತೆಗಳನ್ನು ಪರಿಶೀಲಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಭಾರತೀಯ ಹಜ್ ಸಮಿತಿ ಮೂಲಕ ಒಟ್ಟು 1,22,464 ಯಾತ್ರಿಕರು ಮಕ್ಕಾಗೆ ಆಗಮಿಸಿದ್ದಾರೆ.
ಇದರಲ್ಲಿ ಸುಮಾರು 52,507 ಜನರು ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ತೀರ್ಥಯಾತ್ರೆ ಕೈಗೊಂಡಿದ್ದಾರೆ ಎಂದು ಮಕ್ಕಾದಲ್ಲಿರುವ ಭಾರತೀಯ ಹಜ್ ಹೌಸ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೆಡ್ಡಾದಲ್ಲಿನ ಭಾರತದ ಕಾನ್ಸುಲ್ ಜನರಲ್ ಫಹಾದ್ ಅಹ್ಮದ್ ಖಾನ್ ಸೂರಿ ಮಾತನಾಡಿ, ಮೆಕ್ಕಾದಲ್ಲಿ ಭಾರತೀಯ ಯಾತ್ರಿಕರ ಕಲ್ಯಾಣಕ್ಕಾಗಿ ಹನ್ನೆರಡು ಶಾಖೆಗಳನ್ನು ತೆರೆಯಲಾಗಿದೆ. 13 ವೈದ್ಯಕೀಯ ಚಿಕಿತ್ಸಾಲಯಗಳು, ಒಂದು ಮಿನಿ ಕ್ಲಿನಿಕ್ ಮತ್ತು ಭಾರತೀಯ ಯಾತ್ರಿಕರಿರುವ ಕಟ್ಟಡಗಳಲ್ಲಿ 21 ವೈದ್ಯಕೀಯ ಘಟಕಗಳನ್ನು ತೆರೆಯಲಾಗಿದೆ ಎಂದು ಹೇಳಿದ್ದಾರೆ. ಭಾರತೀಯ ಮುಖ್ಯ ಹಜ್ ಕಚೇರಿಯ ಹೊರತಾಗಿ ಮದೀನಾದಲ್ಲಿ ಎರಡು ಶಾಖೆಗಳನ್ನು ಹಾಗೂ ಮೂರು ವೈದ್ಯಕೀಯ ಚಿಕಿತ್ಸಾಲಯಗಳನ್ನು ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.


















