ಮನೆ ಸುದ್ದಿ ಜಾಲ ಅಮೆರಿಕದಲ್ಲಿ ‘ಪೆದ್ದಿ’ ಟಿಕೆಟ್ ಬೆಲೆ ವಿವಾದ: ಹಾಲಿವುಡ್ ಸಿನಿಮಾಗಳಿಗಿಂತಲೂ ಹೆಚ್ಚು ದರಕ್ಕೆ ಅಭಿಮಾನಿಗಳ ಅಸಮಾಧಾನ

ಅಮೆರಿಕದಲ್ಲಿ ‘ಪೆದ್ದಿ’ ಟಿಕೆಟ್ ಬೆಲೆ ವಿವಾದ: ಹಾಲಿವುಡ್ ಸಿನಿಮಾಗಳಿಗಿಂತಲೂ ಹೆಚ್ಚು ದರಕ್ಕೆ ಅಭಿಮಾನಿಗಳ ಅಸಮಾಧಾನ

0

ರಾಮ್ ಚರಣ್ ಅಭಿನಯದ ಬಹು ನಿರೀಕ್ಷಿತ ‘ಪೆದ್ದಿ’ ಸಿನಿಮಾ ಜೂನ್ 4 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಭಾರತದಲ್ಲಷ್ಟೇ ಅಲ್ಲದೆ ಅಮೆರಿಕದಲ್ಲೂ ತೆಲುಗು ಸಿನಿಮಾಗಳಿಗೆ ದೊಡ್ಡ ಮಟ್ಟದ ಬೇಡಿಕೆ ಇರುವ ಹಿನ್ನೆಲೆ, ಉತ್ತರ ಅಮೆರಿಕದಲ್ಲಿ ಚಿತ್ರವನ್ನು ಭರ್ಜರಿಯಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಆದರೆ ಇದೀಗ ‘ಪೆದ್ದಿ’ ಸಿನಿಮಾದ ಟಿಕೆಟ್ ದರಗಳು ಅಲ್ಲಿನ ಭಾರತೀಯ ಸಿನಿಪ್ರೇಮಿಗಳ ಬೇಸರಕ್ಕೆ ಕಾರಣವಾಗಿವೆ.

ಉತ್ತರ ಅಮೆರಿಕದಲ್ಲಿ ‘ಪೆದ್ದಿ’ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಆದರೆ ಟಿಕೆಟ್ ಬೆಲೆಗಳು ಅಚ್ಚರಿ ಮೂಡಿಸುವಂತಿವೆ. ಸಾಮಾನ್ಯ ಹಾಲಿವುಡ್ ಸಿನಿಮಾಗಳಿಗಿಂತಲೂ ಹೆಚ್ಚಿನ ದರವನ್ನು ‘ಪೆದ್ದಿ’ ಚಿತ್ರಕ್ಕೆ ನಿಗದಿ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮಾಹಿತಿಯ ಪ್ರಕಾರ, ‘ಪೆದ್ದಿ’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ ದರ 20 ರಿಂದ 25 ಡಾಲರ್ ನಡುವೆ ಇದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದು ಸುಮಾರು 2000 ರಿಂದ 2350 ರೂಪಾಯಿವರೆಗೆ ಬರುತ್ತದೆ. ಮೊದಲ ವಾರದ ಸಾಮಾನ್ಯ ಶೋಗಳ ಟಿಕೆಟ್ ದರವೂ 18 ರಿಂದ 20 ಡಾಲರ್ ನಿಗದಿಯಾಗಿದ್ದು, ಪ್ರೇಕ್ಷಕರು ಇದನ್ನು ದುಬಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದಲ್ಲದೆ, ‘ಪೆದ್ದಿ’ ಸಿನಿಮಾದ ಡಿ-ಬಾಕ್ಸ್ ಸ್ಪೆಷಲ್ ಥಿಯೇಟರ್ ಟಿಕೆಟ್ ಬೆಲೆ 42 ಡಾಲರ್ ವರೆಗೆ ಇದೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 5000 ರೂಪಾಯಿ. ಇದೇ ವೇಳೆ ಕ್ರಿಸ್ಟೊಫರ್ ನೋಲನ್ ನಿರ್ದೇಶನದ ಬಹು ನಿರೀಕ್ಷಿತ ಹಾಲಿವುಡ್ ಸಿನಿಮಾ ‘ಒಡೆಸ್ಸಿ’ ಐಮ್ಯಾಕ್ಸ್ ಟಿಕೆಟ್ ದರ ಕೇವಲ 30 ಡಾಲರ್ ಮಾತ್ರ ಎಂಬ ಹೋಲಿಕೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

ಟಿಕೆಟ್ ದರಗಳ ಬಗ್ಗೆ ಅಮೆರಿಕದಲ್ಲಿ ವಾಸಿಸುವ ಭಾರತೀಯ ಸಿನಿಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ. ‘ಧುರಂಧರ್ 1’ ಹಾಗೂ ‘ಧುರಂಧರ್ 2’ ಸಿನಿಮಾಗಳ ಒಟ್ಟು ಟಿಕೆಟ್ ದರಕ್ಕಿಂತಲೂ ‘ಪೆದ್ದಿ’ ಸಿನಿಮಾ ದುಬಾರಿ ಎಂದು ಕೆಲವರು ಪೋಸ್ಟ್ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಇನ್ನೂ ‘ಪೆದ್ದಿ’ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿಲ್ಲ. ಆದರೆ ಬೆಂಗಳೂರು, ಮುಂಬೈ ಸೇರಿದಂತೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರೀಮಿಯರ್ ಶೋಗಳನ್ನು ಆಯೋಜಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಈ ವಿಶೇಷ ಶೋಗಳಿಗೆ ಸಾಮಾನ್ಯ ಪ್ರದರ್ಶನಗಳಿಗಿಂತ ಎರಡು ಪಟ್ಟು ಹೆಚ್ಚು ಟಿಕೆಟ್ ದರ ನಿಗದಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಪರಭಾಷೆ ಸಿನಿಮಾಗಳ ಟಿಕೆಟ್ ದರಗಳು ಈಗಾಗಲೇ ಹೆಚ್ಚಿರುವ ಹಿನ್ನೆಲೆ, ‘ಪೆದ್ದಿ’ ಚಿತ್ರದ ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಸಿನಿಪ್ರೇಮಿಗಳಲ್ಲಿ ಹೆಚ್ಚಾಗಿದೆ.