ಬೆಂಗಳೂರು, ಮೇ 29: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಹಾಗೂ ಇತ್ತೀಚಿನ ವೈಯಕ್ತಿಕ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದಲ್ಲೇ ಸಕ್ರಿಯವಾಗಿ ಮುಂದುವರಿಯುವ ನಿರ್ಧಾರವು ಡಿ.ಕೆ. ಶಿವಕುಮಾರ್ ಅವರ ಮುಂದಿನ ರಾಜಕೀಯ ನಡೆಗೆ ಎಚ್ಚರಿಕೆಯ ಸಂದೇಶವಾಗಬಹುದು ಎಂದು ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ಅವರ ಪ್ರಕಾರ, ಮುಂದಿನ ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಅವರನ್ನು ಜೊತೆಯಲ್ಲೇ ಇಟ್ಟುಕೊಂಡು ಸರ್ಕಾರ ನಡೆಸುವುದು ಹಾಗೂ 2028ರ ವಿಧಾನಸಭೆ ಚುನಾವಣೆಯಲ್ಲಿ ಅವರ ಬೆಂಬಲ ಪಡೆಯುವುದು ಡಿಕೆ ಶಿವಕುಮಾರ್ ಅವರಿಗೆ ದೊಡ್ಡ ಸವಾಲಾಗಲಿದೆ.ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಡಿಕೆ ಶಿವಕುಮಾರ್ ಹಲವು ರಾಜಕೀಯ ಒತ್ತಡಗಳನ್ನು ಎದುರಿಸಬೇಕಾಗಬಹುದು ಎಂದು ಅವರು ಹೇಳಿದ್ದಾರೆ.ಇದೇ ವೇಳೆ ಡಿಕೆ ಶಿವಕುಮಾರ್ ಅವರ ರಾಜಕೀಯ ಹೋರಾಟ, ಸಹನೆ ಮತ್ತು ದೃಢಸಂಕಲ್ಪವನ್ನು ಡಾ. ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಜನ್ಮ ದಿನದಂದೇ ಡಿಕೆ ಶಿವಕುಮಾರ್ ಅವರಿಗೆ ಮೊಮ್ಮಗಳು ಜನಿಸಿದ್ದನ್ನು ಉಲ್ಲೇಖಿಸಿದ ಅವರು, “ಈ ಮಗು ಅವರ ಜೀವನಕ್ಕೆ ಅದೃಷ್ಟ ಲಕ್ಷ್ಮಿಯಾಗಿ ಬಂದಿದೆ” ಎಂದು ಹೇಳಿದ್ದಾರೆ.ಡಿಕೆ ಶಿವಕುಮಾರ್ ಅವರ ಮುಂದಿನ ರಾಜಕೀಯ ಜೀವನ ಯಶಸ್ವಿಯಾಗಲಿ ಎಂದು ಶುಭಾಶಯ ತಿಳಿಸಿದ್ದಾರೆ.


















