ಮನೆ ಸುದ್ದಿ ಜಾಲ ಕಾರಾಗೃಹ ಇಲಾಖೆಯ ಕೋಟ್ಯಂತರ ರೂ ಮೌಲ್ಯದ ಆಸ್ತಿ ಕಬ್ಜಾ? ಇಬ್ಬರ ವಿರುದ್ಧ ದೂರು ದಾಖಲು

ಕಾರಾಗೃಹ ಇಲಾಖೆಯ ಕೋಟ್ಯಂತರ ರೂ ಮೌಲ್ಯದ ಆಸ್ತಿ ಕಬ್ಜಾ? ಇಬ್ಬರ ವಿರುದ್ಧ ದೂರು ದಾಖಲು

0

ಬೆಂಗಳೂರು: ನಗರದ ಗಾಂಧಿನಗರ ಪ್ರದೇಶದಲ್ಲಿರುವ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಗೆ ಸೇರಿದ ಸುಮಾರು 40 ರಿಂದ 50 ಕೋಟಿ ರೂ ಮೌಲ್ಯದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಗಾಂಧಿನಗರದ 2ನೇ ಅಡ್ಡರಸ್ತೆಯಲ್ಲಿರುವ ಮೈಸೂರು ಡಿಸ್ಮಾರ್ಜ್ ಪ್ರಿಸನರ್ಸ್ ಏಡ್ ಸೊಸೈಟಿಗೆ ಸೇರಿದ ಈ ಆಸ್ತಿ ಕಾರಾಗೃಹ ಇಲಾಖೆಯ ಅಧೀನದಲ್ಲಿದೆ. ಇದೀಗ ಈ ಜಾಗವನ್ನು ಅನಧಿಕೃತವಾಗಿ ಬಳಸಲಾಗಿದೆ ಎಂಬ ಆರೋಪ ಎದುರಾಗಿದೆ.

ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಾದ ಖಲಿಂ ಮತ್ತು ಅನಿಲ್ ಕಳೆದ ಒಂದು ವರ್ಷದಿಂದ ಬಳಕೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಶ್ರೀಶೈಲ್ ಎಸ್ ಮೇಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಇಲಾಖೆಯ ಅನುಮತಿ ಇಲ್ಲದೆ ಕಟ್ಟಡದ ಮೊದಲ ಮಹಡಿಯನ್ನು ಅನಿಲ್ ಅತಿಕ್ರಮಿಸಿಕೊಂಡಿದ್ದಾನೆ. ಅಲ್ಲದೆ ಖಲಿಂ ಹಳೆಯ ವಸ್ತುಗಳನ್ನು ಇಲಾಖೆಯ ಆವರಣದಲ್ಲಿ ಸಂಗ್ರಹಿಸಿದ್ದಾನೆ ಎಂದು ಹೇಳಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆದಿದ್ದಾರೆ.

ಜೈಲಿನಲ್ಲಿ ತಯಾರಾಗುವ ಬೇಕರಿ ಉತ್ಪನ್ನಗಳು ಹಾಗೂ ಬಟ್ಟೆ ಮಾರಾಟ ಮಳಿಗೆ ಆರಂಭಿಸುವ ಉದ್ದೇಶದಿಂದ ಕಾರಾಗೃಹ ಇಲಾಖೆ ಹಳೆಯ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಮುಂದಾಗಿತ್ತು. ಈ ವೇಳೆ ಆಸ್ತಿ ಅತಿಕ್ರಮಣವಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಮೈಸೂರು ಮಹಾರಾಜರು ಈ ಜಾಗವನ್ನು ಕಾರಾಗೃಹ ಇಲಾಖೆಗೆ ದಾನವಾಗಿ ನೀಡಿದ್ದರು ಎನ್ನಲಾಗಿದೆ. ಸುಮಾರು 10 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಜಾಗದ ಇಂದಿನ ಮಾರುಕಟ್ಟೆ ಮೌಲ್ಯ 40 ರಿಂದ 50 ಕೋಟಿ ರೂ ಎಂದು ಅಂದಾಜಿಸಲಾಗಿದೆ.