ಮನೆ ಸುದ್ದಿ ಜಾಲ ಸಿದ್ದರಾಮಯ್ಯ ವಿರುದ್ಧ ದ್ವೇಷವಿಲ್ಲ: ರಾಜಮನೆತನಕ್ಕೆ ಹತ್ತಿರವೂ ಅಲ್ಲ, ದೂರವೂ ಅಲ್ಲ ಎಂದ ಪ್ರಮೋದಾದೇವಿ ಒಡೆಯರ್

ಸಿದ್ದರಾಮಯ್ಯ ವಿರುದ್ಧ ದ್ವೇಷವಿಲ್ಲ: ರಾಜಮನೆತನಕ್ಕೆ ಹತ್ತಿರವೂ ಅಲ್ಲ, ದೂರವೂ ಅಲ್ಲ ಎಂದ ಪ್ರಮೋದಾದೇವಿ ಒಡೆಯರ್

0

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಯಾವುದೇ ವೈಯಕ್ತಿಕ ವಿರೋಧ ಅಥವಾ ದ್ವೇಷ ಇಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ರಾಜಮನೆತನದೊಂದಿಗೆ ವಿಶೇಷವಾಗಿ ಹತ್ತಿರವೂ ಇಲ್ಲ, ದೂರವೂ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದಾದೇವಿ ಒಡೆಯರ್, ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆ ಆಗುವುದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳಬಾರದು ಎಂದು ಅವರು ತಿಳಿಸಿದರು.“ಒಬ್ಬ ನಾಯಕ ಅಧಿಕಾರದಿಂದ ಹೊರಬಂದರೆ ಅಭಿವೃದ್ಧಿ ನಿಲ್ಲುತ್ತದೆ ಎನ್ನುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಅಭಿವೃದ್ಧಿ ಕುಂಠಿತವಾದರೆ ಜನರು ತಮ್ಮ ಪ್ರತಿನಿಧಿಗಳ ಮೇಲೆ ಒತ್ತಡ ಹೇರಿ ಕೆಲಸಗಳನ್ನು ಮುಂದುವರಿಸಬೇಕು” ಎಂದು ಅವರು ಹೇಳಿದರು.

ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಯಾರೇ ಆಗಿ ಅಧಿಕಾರ ಸ್ವೀಕರಿಸಿದರೂ, ಆಡಳಿತ ವ್ಯವಸ್ಥೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಕೆಲ ಸಮಯ ಬೇಕಾಗುತ್ತದೆ ಎಂದು ಪ್ರಮೋದಾದೇವಿ ಅಭಿಪ್ರಾಯಪಟ್ಟರು.“ನೂತನ ಮುಖ್ಯಮಂತ್ರಿಗೆ ಆಡಳಿತದ ಕಾರ್ಯವೈಖರಿ ಅರ್ಥಮಾಡಿಕೊಳ್ಳಲು ಹಾಗೂ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕನಿಷ್ಠ ಮೂರುರಿಂದ ನಾಲ್ಕು ತಿಂಗಳುಗಳ ಕಾಲಾವಕಾಶ ಅಗತ್ಯವಿದೆ” ಎಂದು ಅವರು ಹೇಳಿದರು.ಮೈಸೂರಿಗೆ ಈಗಾಗಲೇ ಅನುಮೋದನೆ ದೊರೆತಿರುವ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹೊಸ ಸರ್ಕಾರ ಮುಂದುವರಿಸಬೇಕು ಎಂದು ಪ್ರಮೋದಾದೇವಿ ಒಡೆಯರ್ ಒತ್ತಾಯಿಸಿದರು. ನಗರದ ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳು ಯಾವುದೇ ಅಡೆತಡೆ ಇಲ್ಲದೆ ಸಾಗಬೇಕು ಎಂಬುದು ತಮ್ಮ ಆಶಯ ಎಂದು ತಿಳಿಸಿದರು.