ಬೆಂಗಳೂರು (ಮೇ 30): ಐಪಿಎಲ್ 2026ರ ಫೈನಲ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅರ್ಹತೆ ಪಡೆದಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸಂಭ್ರಮಾಚರಣೆ ಹೆಚ್ಚುವ ಸಾಧ್ಯತೆ ಇದೆ. ಈ ಹಿನ್ನೆಲೆ ಬೆಂಗಳೂರು ನಗರ ಪೊಲೀಸರು ಅಭಿಮಾನಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.
ಮೇ 31ರಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದ ಬಳಿಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಸೂಚನೆಗಳನ್ನು ಹೊರಡಿಸಿದೆ. ಸಾರ್ವಜನಿಕರು ನಿಯಮಗಳನ್ನು ಪಾಲಿಸಿ ಶಾಂತಿಯುತವಾಗಿ ಪಂದ್ಯವನ್ನು ವೀಕ್ಷಿಸಬೇಕು ಎಂದು ಮನವಿ ಮಾಡಲಾಗಿದೆ. ಪೊಲೀಸರ ಸೂಚನೆಯಂತೆ, ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡಿ ಸಂಭ್ರಮಾಚರಣೆ ನಡೆಸುವುದು, ರಸ್ತೆಗಳಲ್ಲಿ ಕೂಗಾಡುವುದು ಅಥವಾ ಅತಿಯಾದ ಗದ್ದಲ ಸೃಷ್ಟಿಸುವುದು ಅನುಮತಿಸಲಾಗುವುದಿಲ್ಲ. ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ದುರಂತವನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಪಟಾಕಿ, ಎಲ್ಇಡಿ ವಾಲ್ಗಳಿಗೆ ಅನುಮತಿ ಅಗತ್ಯ
RCB ತಂಡ ಫೈನಲ್ ಗೆದ್ದರೂ ಸಹ ಅನುಮತಿ ಇಲ್ಲದೆ ಪಟಾಕಿ ಸಿಡಿಸುವಂತಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ ರಸ್ತೆ ಬದಿಗಳಲ್ಲಿ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ಅನುಮತಿ ಪಡೆಯದೆ ಎಲ್ಇಡಿ ವಾಲ್ಗಳನ್ನು ಅಳವಡಿಸುವುದಕ್ಕೂ ಅವಕಾಶ ಇರುವುದಿಲ್ಲ.
ಬೈಕ್ ರ್ಯಾಲಿ ಮತ್ತು ಸ್ಟಂಟ್ಗಳಿಗೆ ನಿಷೇಧ
ಬೈಕ್ ರ್ಯಾಲಿ, ಅತಿವೇಗದ ವಾಹನ ಚಾಲನೆ, ಸ್ಟಂಟ್ ಪ್ರದರ್ಶನ, ಹಾರ್ನ್ ದುರುಪಯೋಗ ಹಾಗೂ ರಸ್ತೆ ತಡೆ ಮಾಡುವಂತಹ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನಕ್ಕೆ ಅವಕಾಶ ಇಲ್ಲ
ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಸಾಮಾಜಿಕ ಜಾಲತಾಣ ಬಳಕೆಯಲ್ಲೂ ಎಚ್ಚರಿಕೆ
ದ್ವೇಷಪೂರಿತ ಪೋಸ್ಟ್ಗಳು, ಪ್ರಚೋದನಕಾರಿ ಸಂದೇಶಗಳು ಅಥವಾ ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಇತರ ತಂಡಗಳ ಅಭಿಮಾನಿಗಳನ್ನು ನಿಂದಿಸುವ ಅಥವಾ ಜಗಳಕ್ಕೆ ಕಾರಣವಾಗುವ ರೀತಿಯ ಪೋಸ್ಟ್ಗಳನ್ನು ಪ್ರಕಟಿಸದಂತೆ ಸೂಚಿಸಲಾಗಿದೆ.















