ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಬೆಳವಣಿಗೆಯೊಂದು ಚರ್ಚೆಗೆ ಗ್ರಾಸವಾಗಿದೆ. ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೊಸ ರಾಜಕೀಯ ಸಂಘಟನೆ ಅಥವಾ ಪಕ್ಷ ಆರಂಭಿಸುವ ಕುರಿತು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಮೂಲಗಳ ಪ್ರಕಾರ, ಸಮಾನ ಮನಸ್ಕರನ್ನು ಒಗ್ಗೂಡಿಸಿ ಬಲಿಷ್ಠ ಸ್ವಯಂಸೇವಕರ ಪಡೆಯನ್ನು ನಿರ್ಮಿಸುವ ಉದ್ದೇಶವನ್ನು ಅಣ್ಣಾಮಲೈ ಹೊಂದಿದ್ದಾರೆ ಎನ್ನಲಾಗಿದೆ. ಈ ಹೊಸ ಸಂಘಟನೆಗೆ “ಮಕ್ಕಳ್ ಶಕ್ತಿ ಇಯಕ್ಕಂ” (ಜನಶಕ್ತಿ ಚಳವಳಿ) ಎಂಬ ಹೆಸರನ್ನು ಇಡಲು ಚಿಂತನೆ ನಡೆದಿದೆ ಎಂಬ ವದಂತಿಗಳೂ ಹರಿದಾಡುತ್ತಿವೆ.
ಆದರೆ, ಈ ಕುರಿತು ಅಣ್ಣಾಮಲೈ ಅಥವಾ ಅವರ ಆಪ್ತ ವಲಯದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಹೀಗಾಗಿ ಹೊಸ ಪಕ್ಷ ಅಥವಾ ಸಂಘಟನೆ ರಚನೆ ಕುರಿತ ಮಾಹಿತಿ ಇನ್ನೂ ಊಹಾಪೋಹದ ಹಂತದಲ್ಲೇ ಇದೆ.
ಇತ್ತೀಚೆಗೆ ಸಿಬಿಎಸ್ಇ 9ನೇ ತರಗತಿಗೆ ಜಾರಿಗೊಳಿಸಲಾಗಿರುವ ತ್ರಿಭಾಷಾ ನೀತಿ ಕುರಿತು ಅಣ್ಣಾಮಲೈ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ನೀತಿ ತಮಿಳುನಾಡಿನ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ, ನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ 2020ರಲ್ಲಿ ರಾಜಕೀಯ ಪ್ರವೇಶ ಮಾಡಿದರು. 2021ರಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅವರು, ಪಕ್ಷದ ಸಂಘಟನೆ ಬಲವರ್ಧನೆಗೆ ಪ್ರಮುಖ ಪಾತ್ರ ವಹಿಸಿದ್ದರು.
ಅವರ ನೇತೃತ್ವದಲ್ಲಿ ಬಿಜೆಪಿ ತಮಿಳುನಾಡಿನಲ್ಲಿ ತನ್ನ ರಾಜಕೀಯ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸಿತ್ತು. ಇದೀಗ ಹೊಸ ರಾಜಕೀಯ ವೇದಿಕೆ ರೂಪಿಸುವ ಸಾಧ್ಯತೆ ಕುರಿತು ಚರ್ಚೆಗಳು ನಡೆಯುತ್ತಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ಹೊಸ ಸಂಘಟನೆ ಸ್ಥಾಪನೆಯ ಬಗ್ಗೆ ಅಧಿಕೃತ ಘೋಷಣೆ ಹೊರಬರುವವರೆಗೆ ಈ ಕುರಿತು ಸ್ಪಷ್ಟತೆ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

















