ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್ಗೆ ಸ್ಥಳಾಂತರಿಸಿದ ಕ್ರಮವು ಕೇವಲ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕಷ್ಟೇ ಅಲ್ಲ, ಬೆಂಗಳೂರು ಹಾಗೂ ಕರ್ನಾಟಕದ ಯುವ ಕ್ರೀಡಾಭಿಮಾನಿಗಳಿಗೂ ಅನ್ಯಾಯವಾಗಿದೆ ಎಂದು ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಾಗಿತ್ತು. ಆದರೆ ಅಂತಿಮವಾಗಿ ಪಂದ್ಯವನ್ನು ಅಹಮದಾಬಾದ್ಗೆ ಸ್ಥಳಾಂತರಿಸಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈ ನಿರ್ಧಾರದಿಂದ ಆರ್ಸಿಬಿಗೆ ಮಾತ್ರವಲ್ಲ, ಬೆಂಗಳೂರು ಮತ್ತು ಕರ್ನಾಟಕದ ಯುವಕರಿಗೂ ಅನ್ಯಾಯವಾಗಿದೆ. ಫೈನಲ್ ಪಂದ್ಯ ಇಲ್ಲಿಯೇ ನಡೆಯಬೇಕಿತ್ತು. ಆದರೆ ಅದನ್ನು ಅಹಮದಾಬಾದ್ನಲ್ಲಿ ಆಯೋಜಿಸಲಾಯಿತು. ಆದರೂ ನಾವು ಎಲ್ಲವನ್ನೂ ಮರೆತು ಹೊಸದಾಗಿ ಮುಂದುವರಿಯುತ್ತಿದ್ದೇವೆ” ಎಂದು ಡಿಕೆ ಶಿವಕುಮಾರ್ ಹೇಳಿದರು.
ಐಪಿಎಲ್ ನಿಯಮಾವಳಿಗಳ ಪ್ರಕಾರ, ಹಾಲಿ ಚಾಂಪಿಯನ್ ತಂಡದ ತವರು ಮೈದಾನದಲ್ಲಿ ಫೈನಲ್ ಹಾಗೂ ಒಂದು ಪ್ಲೇಆಫ್ ಪಂದ್ಯ ಆಯೋಜಿಸುವ ಅವಕಾಶ ಇರುತ್ತದೆ. ಕಳೆದ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ RCB ತಂಡದ ತವರು ಮೈದಾನವಾಗಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಫೈನಲ್ ಪಂದ್ಯಕ್ಕೆ ಆಯ್ಕೆಯಾಗುವ ಸಾಧ್ಯತೆ ಇತ್ತು.
ಆದರೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನಿಗದಿತ ಕೋಟಾಕ್ಕಿಂತ ಹೆಚ್ಚಿನ ಉಚಿತ ಟಿಕೆಟ್ಗಳ ಬೇಡಿಕೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪಂದ್ಯವನ್ನು ಅಹಮದಾಬಾದ್ಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಹಿಂದೆ ಸ್ಪಷ್ಟಪಡಿಸಿದ್ದರು.
ಬಿಸಿಸಿಐ ನಿಯಮಗಳ ಪ್ರಕಾರ, ಆತಿಥೇಯ ಸಂಸ್ಥೆಗೆ ಕ್ರೀಡಾಂಗಣದ ಒಟ್ಟು ಆಸನ ಸಾಮರ್ಥ್ಯದ ಶೇ.15ರಷ್ಟು ಉಚಿತ ಟಿಕೆಟ್ಗಳನ್ನು ಮಾತ್ರ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇದೇ ವೇಳೆ, ಅಹಮದಾಬಾದ್ನಲ್ಲಿ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ RCB ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವು ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ವಿರಾಟ್ ಕೊಹ್ಲಿ ಅವರ ಅಜೇಯ 75 ರನ್ಗಳ ನೆರವಿನಿಂದ ಆರ್ಸಿಬಿ 156 ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದು, ಸತತ ಎರಡನೇ ಬಾರಿ ಐಪಿಎಲ್ ಟ್ರೋಫಿ ಎತ್ತಿಹಿಡಿದಿದೆ.


















