ಮನೆ ಸುದ್ದಿ ಜಾಲ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಗಾಯಕಿ ಸುಮನ್ ಕಲ್ಯಾಣ್‌ಪುರ್ ವಿಧಿವಶ

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಗಾಯಕಿ ಸುಮನ್ ಕಲ್ಯಾಣ್‌ಪುರ್ ವಿಧಿವಶ

0

ಭಾರತೀಯ ಚಿತ್ರರಂಗದ ಹಿರಿಯ ಹಿನ್ನೆಲೆ ಗಾಯಕಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಸುಮನ್ ಕಲ್ಯಾಣ್‌ಪುರ್ ಕೊನೆಯುಸಿರೆಳೆದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಈ ನಿಧನ ಭಾರತೀಯ ಸಂಗೀತ ಲೋಕದಲ್ಲಿ ಒಂದು ಗಮನಾರ್ಹ ಅಧ್ಯಾಯದ ಅಂತ್ಯವನ್ನು ಸೂಚಿಸಿದೆ. ಮೃದು, ಸುಮಧುರ ಧ್ವನಿ ಮತ್ತು ಅದ್ಭುತ ಗಾಯನ ಶೈಲಿಗೆ ಹೆಸರುವಾಸಿಯಾದ ಸುಮನ್ ಕಲ್ಯಾಣ್‌ಪುರ್ ಹಲವಾರು ದಶಕಗಳ ಕಾಲ ಭಾಷೆಗಳ ಗಡಿಮೀರಿ ವೃತ್ತಿಜೀವನ ಸ್ಥಾಪಿಸಿಕೊಂಡಿದ್ದರು. ಹಿಂದಿ, ಮರಾಠಿ, ಗುಜರಾತಿ, ಬಂಗಾಳಿ, ಭೋಜ್‌ಪುರಿ ಮತ್ತು ಹಲವಾರು ಇತರ ಭಾರತೀಯ ಭಾಷೆಗಳಲ್ಲಿ ಶ್ರೀಮಂತ ಸಂಗೀತ ಪರಂಪರೆ ಸ್ಥಾಪಿಸಿ ಹೊರಟಿದ್ದು, ಇದೀಗ ಎಲ್ಲೆಡೆಯಿಂದ ಸಂತಾಪ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.

ಈ ಕುರಿತು ಸುಮನ್ ಕಲ್ಯಾಣ್‌ಪುರ್ ಅವರ ಧ್ವನಿಯನ್ನು ಹೆಚ್ಚಾಗಿ ಲತಾ ಮಂಗೇಶ್ಕರ್ ಅವರ ಧ್ವನಿಗೆ ಹೋಲಿಸಲಾಗುತ್ತಿತ್ತು. ಆದರೆ, ವರ್ಷಗಳಲ್ಲಿ ಅವರು ತಮ್ಮದೇ ಆದ ವಿಶಿಷ್ಟ ಗುರುತನ್ನು ರೂಪಿಸಿಕೊಂಡರು. ಅವರ ಹಾಡುಗಳು ಶುದ್ಧತೆ, ಭಾವನಾತ್ಮಕ ಆಳ ಮತ್ತು ಶಾಸ್ತ್ರೀಯ ಸ್ಪರ್ಶಕ್ಕೆ ಹೆಸರುವಾಸಿಯಾಗಿದ್ದವು. ಅವರ ನಿಧನಕ್ಕೆ ದೇಶಾದ್ಯಂತ ರಾಜಕೀಯ ಮುಖಂಡರು, ಸಂಗೀತಗಾರರು ಮತ್ತು ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ, ಭಾರತೀಯ ಸಂಗೀತಕ್ಕೆ ದೊಡ್ಡ ನಷ್ಟ ಎಂದು ಹೇಳಿದರೆ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ – ಅವರ ಧ್ವನಿ ತಲೆಮಾರುಗಳವರೆಗೆ ಪ್ರತಿಧ್ವನಿಸುತ್ತಲೇ ಇರುತ್ತದೆ ಎಂದು ಹೇಳಿದರು. ಎಸ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡಾ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸುಮನ್ ಕಲ್ಯಾಣ್‌ಪುರ್ ಸಾಧನೆಗೆ ಗೌರವ ಸಲ್ಲಿಸಿದರು. ”ಮಧುರ ಮತ್ತು ಆತ್ಮವನ್ನು ಕಲಕುವ ಧ್ವನಿಯಾಗಿದ್ದ ಹಿರಿಯ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣ್‌ಪುರ್ ಅವರ ನಿಧನದೊಂದಿಗೆ ಭಾರತೀಯ ಸಂಗೀತ ಲೋಕ ಇಂದು ಮೌನವಾಗಿದೆ. ಆರು ದಶಕಗಳಿಗೂ ಹೆಚ್ಚು ಕಾಲ, ಅವರು ತಮ್ಮ ಅಪ್ರತಿಮ ಗಾಯನದ ಮೂಲಕ ಸಂಗೀತ ಪ್ರಿಯರ ಹೃದಯದಲ್ಲಿ ಸರ್ವೋಚ್ಛ ಸ್ಥಾನ ಪಡೆದರು. ಮರಾಠಿ, ಹಿಂದಿ, ಬಂಗಾಳಿ, ಒಡಿಯಾ ಮತ್ತು ಇತರ ಭಾಷೆಗಳಲ್ಲಿ ಅವರ ಅಮರ ಮಧುರ ಸಂಗೀತವು ಸಂಗೀತ ಲೋಕದ ಅಮೂಲ್ಯ ನಿಧಿಯಾಗಿ ಉಳಿದಿದೆ. ‘ಪದ್ಮಭೂಷಣ’ ಪ್ರಶಸ್ತಿಯಿಂದ ಗೌರವಿಸಲ್ಪಟ್ಟ ಅವರು, ತಮ್ಮ ಮಾಂತ್ರಿಕ ಧ್ವನಿಯಿಂದ ಭಾರತೀಯ ಸಂಗೀತವನ್ನು ಶ್ರೀಮಂತಗೊಳಿಸಿದರು. ಅವರ ಹಾಡುಗಳಲ್ಲಿನ ಮಾಧುರ್ಯ ಮತ್ತು ಭಾವನಾತ್ಮಕ ಅಭಿವ್ಯಕ್ತಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಅವರ ನಿಧನ ಸಂಗೀತ ಲೋಕಕ್ಕೆ ಆಳ ನಷ್ಟ. ನಾನು ಅವರಿಗೆ ನನ್ನ ಹೃತ್ಪೂರ್ವಕ ಗೌರವವನ್ನು ಸಲ್ಲಿಸುತ್ತೇನೆ. ಅವರ ಕುಟುಂಬದ ದುಃಖದಲ್ಲಿ ನಾವು ಭಾಗಿಯಾಗುತ್ತೇವೆ ಎಂದು ಬರೆದುಕೊಂಡಿದ್ದಾರೆ. ಕಳೆದ 2023ರಲ್ಲಿ, ಸುಮನ್ ಕಲ್ಯಾಣ್‌ಪುರ್ ಅವರು ಭಾರತೀಯ ಸಂಗೀತಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಲೆಜೆಂಡರಿ ಗಾಯಕಿ ಈಗ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಕಾಲಾತೀತ ಮಧುರ ಗೀತೆಗಳು ಕೇಳುಗರಿಗೆ ಸ್ಫೂರ್ತಿ ನೀಡುತ್ತವೆ ಮತ್ತು ಮುಂಬರುವ ವರ್ಷಗಳಲ್ಲಿ ಅವರ ಸ್ಮರಣೆ ನಡೆಯಲಿದೆ ಎಂದು ತಿಳಿದುಬಂದಿದೆ.