ಮನೆ ಸುದ್ದಿ ಜಾಲ ನೈಋತ್ಯ ರೈಲ್ವೆಗೆ ಮೇ ತಿಂಗಳಲ್ಲಿ ₹770.71 ಕೋಟಿ  ದಾಖಲೆಯ ಆದಾಯ

ನೈಋತ್ಯ ರೈಲ್ವೆಗೆ ಮೇ ತಿಂಗಳಲ್ಲಿ ₹770.71 ಕೋಟಿ  ದಾಖಲೆಯ ಆದಾಯ

0

ಹುಬ್ಬಳ್ಳಿ: ನೈಋತ್ಯ ರೈಲ್ವೆ ಮೇ 2026ರಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕರ ಆದಾಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ. ಈ ಅವಧಿಯಲ್ಲಿ ವಲಯವು ಒಟ್ಟು 4.4 ಮಿಲಿಯನ್ ಟನ್ ಸರಕು ಸಾಗಣೆ ನಡೆಸಿದ್ದು, ಇದು ಮೇ ತಿಂಗಳಲ್ಲಿನ ಇದುವರೆಗಿನ ಅತಿ ಹೆಚ್ಚು ಸಾಧನೆಯಾಗಿದೆ. ಸರಕು ಸಾಗಣೆಯಿಂದ 425 ಕೋಟಿ ರೂ. ಆದಾಯ ಗಳಿಸಲಾಗಿದೆ. ಪ್ರಯಾಣಿಕರ ವಿಭಾಗದಲ್ಲಿಯೂ ಉತ್ತಮ ಸಾಧನೆ ಕಂಡುಬಂದಿದ್ದು, 302 ಕೋಟಿ ರೂ. ಆದಾಯ ದಾಖಲಿಸುವುದರ ಜೊತೆಗೆ 16.4 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಲಾಗಿದೆ. ಒಟ್ಟಾರೆ, ಮೇ 2026ರಲ್ಲಿ ನೈಋತ್ಯ ರೈಲ್ವೆಯ ಒಟ್ಟು ಆದಾಯ 770.71 ಕೋಟಿ ರೂ.ಗಳಷ್ಟಾಗಿದೆ. ಮೇ 2026ರಲ್ಲಿ ನೈಋತ್ಯ ರೈಲ್ವೆ 4.40 ಮಿಲಿಯನ್ ಟನ್ ಮೂಲ ಸರಕು ಸಾಗಣೆ ಮಾಡಿದ್ದು, ಇದು ಕಳೆದ ವರ್ಷದ ಇದೇ ಅವಧಿಯ 4.22 ಮಿಲಿಯನ್ ಟನ್‌ಗೆ ಹೋಲಿಸಿದರೆ 4.3% ಹೆಚ್ಚಾಗಿದೆ. ಅಲ್ಲದೆ, ಈ ಸಾಧನೆಯು 2008ರ ಮೇ ತಿಂಗಳಲ್ಲಿ ಸ್ಥಾಪಿತವಾದ 4.25 ಮಿಲಿಯನ್ ಟನ್ ದಾಖಲೆಯನ್ನು ಮೀರಿಸಿದೆ ಎನ್ನಲಾಗಿದೆ.

ದಿನಕ್ಕೆ ಸರಾಸರಿ 2,275 ವ್ಯಾಗನ್‌ಗಳನ್ನು ಲೋಡ್ ಮಾಡಲಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಇದು 2,193 ವ್ಯಾಗನ್‌ಗಳಾಗಿತ್ತು, ಅಂದರೆ ಶೇ 3.7ರಷ್ಟು ಬೆಳವಣಿಗೆ ಕಂಡುಬಂದಿದೆ. ಸರಕುಗಳ ವಿಭಾಗದಲ್ಲಿ, ಮೇ 2026ರಲ್ಲಿ 1.766 ಮಿಲಿಯನ್ ಟನ್ ಕಬ್ಬಿಣದ ಅದಿರು, 0.921 ಮಿಲಿಯನ್ ಟನ್ ಉಕ್ಕು ಹಾಗೂ 0.108 ಮಿಲಿಯನ್ ಟನ್ ಕಚ್ಚಾ ವಸ್ತು ಸಾಮಗ್ರಿ ಸಾಗಿಸಲಾಗಿದೆ. ಕಲ್ಲಿದ್ದಲು ಲೋಡಿಂಗ್ 0.93 ಮಿಲಿಯನ್ ಟನ್‌ಗೆ ಏರಿಕೆಯಾಗಿದ್ದು, ಮೇ 2025ರ 0.76 ಮಿಲಿಯನ್ ಟನ್‌ಗೆ ಹೋಲಿಸಿದರೆ 23.3% ಗಣನೀಯ ಬೆಳವಣಿಗೆ ಕಂಡಿದೆ. ಆಹಾರ ಧಾನ್ಯಗಳ ಲೋಡಿಂಗ್ 0.022 ಮಿಲಿಯನ್ ಟನ್‌ಗಳಾಗಿದ್ದು, ಕಂಟೇನರ್ ಸಾಗಣೆ 0.09 ಮಿಲಿಯನ್ ಟನ್ ತಲುಪಿದ್ದು, ಕಳೆದ ವರ್ಷದ 0.07 ಮಿಲಿಯನ್ ಟನ್‌ಗೆ ಹೋಲಿಸಿದರೆ 16.9% ಹೆಚ್ಚಳವಾಗಿದೆ. ಜೊತೆಗೆ, ಇತರೆ ಸರಕುಗಳ (BOG) ಲೋಡಿಂಗ್ 0.14 ಮಿಲಿಯನ್ ಟನ್‌ನಿಂದ 0.22 ಮಿಲಿಯನ್ ಟನ್‌ಗೆ ಏರಿಕೆಯಾಗಿದ್ದು, 56.3% ಗಣನೀಯ ವೃದ್ಧಿಯನ್ನು ದಾಖಲಿಸಿದೆ.

ಆದರಿಂದ ಆರ್ಥಿಕ ಕಾರ್ಯಕ್ಷಮತೆಯ ದೃಷ್ಟಿಯಿಂದ, ಮೇ 2026ರಲ್ಲಿ ಒಟ್ಟು ಗಳಿಕೆ 770.71 ಕೋಟಿ ರೂ.ಗಳಾಗಿದ್ದು, ಪ್ರಯಾಣಿಕರ ಆದಾಯ 302.34 ಕೋಟಿ ರೂ.ಗಳಾಗಿ 21.37% ಬೆಳವಣಿಗೆ ಕಂಡಿದೆ. ಪ್ರಯಾಣಿಕರ ಸಂಖ್ಯೆ 16.36 ಮಿಲಿಯನ್‌ಗೆ ಏರಿಕೆಯಾಗಿದ್ದು, ಕಳೆದ ವರ್ಷಗಿಂತ 6.72% ಹೆಚ್ಚಳ ಹಾಗೂ ಗುರಿಯನ್ನು 8.09% ಮೀರಿದೆ. ಸರಕು ಸಾಗಣೆ ಆದಾಯ 425.67 ಕೋಟಿ ರೂ.ಗಳಾಗಿದ್ದು, ಇತರ ಕೋಚಿಂಗ್ ಆದಾಯ 26.10 ಕೋಟಿ ರೂ., ಪಾರ್ಸೆಲ್ ಆದಾಯ 13.82 ಕೋಟಿ ರೂ. ಹಾಗೂ ಇತರೆ ಆದಾಯ 16.60 ಕೋಟಿ ರೂ.ಗಳಾಗಿವೆ. ಟಿಕೆಟ್ ಪರಿಶೀಲನೆ ಆದಾಯ 5.53 ಕೋಟಿ ರೂ. ಮತ್ತು ವಾಣಿಜ್ಯ ಇತರ ಆದಾಯ 5.70 ಕೋಟಿ ರೂ.ಗಳಾಗಿದೆ. ಹಣಕಾಸು ವರ್ಷದ ಮೇ 2026ರವರೆಗಿನ ಅವಧಿಯಲ್ಲಿ ಸಂಚಿತ ಆದಾಯವು ಉತ್ತಮ ಪ್ರಗತಿ ಕಂಡಿದೆ. ಪ್ರಯಾಣಿಕರ ಆದಾಯ 609.68 ಕೋಟಿ ರೂ.ಗೆ ಏರಿಕೆಯಾಗಿದ್ದು, 16.2% ಬೆಳವಣಿಗೆಯನ್ನು ದಾಖಲಿಸಿದೆ. ಸರಕು ಸಾಗಣೆ ಆದಾಯ 782.92 ಕೋಟಿ ರೂ.ಗೆ ತಲುಪಿದ್ದು, ಇತರ ಕೋಚಿಂಗ್ ಆದಾಯ 54.75 ಕೋಟಿ ರೂ. ಮತ್ತು ಇತರೆ ಆದಾಯ 34.11 ಕೋಟಿ ರೂ.ಗಳಾಗಿದೆ. ಈ ಅವಧಿಯ ಒಟ್ಟು ಆದಾಯ 1,481.46 ಕೋಟಿ ರೂ.ಗಳಾಗಿದ್ದು, ವಲಯದ ಒಟ್ಟಾರೆ ಆರ್ಥಿಕ ಸಾಧನೆ ಮಾಡಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ‌.ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.