ಧೆಂಕನಲ್(ಒಡಿಶಾ): ಕಾಡಾನೆ ಕೊಂದು ಹೂತು ಹಾಕಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಒಡಿಶಾದ ಧೆಂಕನಲ್ ಜಿಲ್ಲೆಯ ಫಾರ್ಮ್ಹೌಸ್ವೊಂದರಲ್ಲಿ ಘಟನೆ ನಡೆದಿದ್ದು, ಅದರ ಮಾಲೀಕ ಸೇರಿದಂತೆ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು ಧೆಂಕನಲ್ ಜಿಲ್ಲೆಯ ಹಿಂದೋಲಾ ಅರಣ್ಯ ಪ್ರದೇಶದ ಚರಣ್‌ಪುರ ಸಮೀಪದ ತೋಟದ ಮನೆಯ ಆವರಣದಲ್ಲಿ ಕಾಡಾನೆ ಕೊಂದು, ಬಳಿಕ ಪ್ರಕರಣ ಮರೆಮಾಚಲು ಜೆಸಿಬಿ ಬಳಸಿ ಹೂತಿಟ್ಟ ಘಟನೆ ಸ್ಥಳೀಯವಾಗಿ ತೀವ್ರ ಸಂಚಲನ ಸೃಷ್ಟಿಸಿದೆ. ಸೌರ ಬೇಲಿಗೆ ವಿದ್ಯುತ್ ತಂತಿ ಅಳವಡಿಸಿ ಆನೆಯನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ.
ಈ ಕುರಿತು ಫಾರ್ಮ್‌ಹೌಸ್ ಮಾಲೀಕ ಪ್ರಮೋದ್ ಕುಮಾರ್ ರಾಜ್ ಅಲಿಯಾಸ್ ಕುಬೇರ್ ಎಂಬಾತನೇ ಪ್ರಕರಣದ ಪ್ರಮುಖ ಆರೋಪಿ. ಘಟನೆ ನಡೆದ ಐದು ದಿನಗಳ ಬಳಿಕ ಈ ಬಗ್ಗೆ ಮಾಹಿತಿ ಪಡೆದ ಧೆಂಕನಲ್ ಡಿಎಫ್‌ಒ ಮತ್ತು ಅಂಗುಲ್ ಆರ್‌ಸಿಸಿಎಫ್ ತಂಡದವರು ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ. ಹೂತಿದ್ದ ಕಾಡಾನೆಯ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಅದೇ ಸ್ಥಳದಲ್ಲಿ ಹೂಳಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ, ಸಂಬಂಧಪಟ್ಟ ತೋಟದ ಮನೆಯ ಮಾಲೀಕ, ತೋಟದ ಮನೆಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಹಾಗೂ ಕೃತ್ಯದಲ್ಲಿ ಭಾಗಿಯಾದ ಜೆಸಿಬಿ ಆಪರೇಟರ್ನನ್ನು ಬಂಧಿಸಲಾಗಿದೆ. ಅಲ್ಲದೇ, ಜೆಸಿಬಿ ಯಂತ್ರ ವಶಪಡಿಸಿಕೊಳ್ಳಲಾಗಿದ್ದು, ಅರಣ್ಯ ಇಲಾಖೆ ತನಿಖೆ ಮುಂದುವರೆಸಿದೆ. ಮೃತ ಆನೆಯು 30 ರಿಂದ 40 ವರ್ಷ ವಯಸ್ಸಿನದು ಎಂದು ಅಂದಾಜಿಸಲಾಗಿದೆ. ಆನೆಗಳು ಬಾರದಂತೆ ಫಾರ್ಮ್‌ಹೌಸ್‌ನ ಸುತ್ತಲೂ ಅಳವಡಿಸಲಾದ ಸೌರ ಬೇಲಿಯ ಸಂಪರ್ಕಕ್ಕೆ ಬಂದು ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವನ್ನಪ್ಪಿದೆ.
ಬಳಿಕ ಫಾರ್ಮ್‌ಹೌಸ್ ಮಾಲೀಕರು ಘಟನೆಯನ್ನು ಮರೆಮಾಡಲು ಅದನ್ನು ಜಮೀನಿನಲ್ಲಿ ಹೂತು ಹಾಕಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಧೆಂಕನಲ್ ವಿಭಾಗೀಯ ಅರಣ್ಯ ಅಧಿಕಾರಿ ಲಲಿತ್ ಪಾತ್ರ ಅವರು ಮಾಹಿತಿ ನೀಡಿ, ‘ಈ ಘಟನೆಯಲ್ಲಿ ಫಾರ್ಮ್‌ಹೌಸ್ ಮಾಲೀಕರು ಮತ್ತು ಅವರ ಇಬ್ಬರು ಸಹಚರರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಆನೆಯ ಸಾವಿಗೆ ನಿಖರವಾದ ಕಾರಣ ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವೇ ತಿಳಿಯಲಿದೆ’ ಎಂದು ಹೇಳಿದ್ದಾರೆ. ಅಂಗುಲ್ ಆರ್‌ಸಿಸಿಎಫ್ ಸಂಜಯ್ ಸ್ವೈನ್ ಅವರು ಮಾತನಾಡಿ, ‘ಮೃತ ಆನೆಯ ವಯಸ್ಸು 30 ರಿಂದ 40 ವರ್ಷಗಳು ಎಂದು ಅಂದಾಜಿಸಲಾಗಿದೆ. ಅದೊಂದು ಮಖ್ನಾ ಆನೆಯಾಗಿದ್ದು, ಅದಕ್ಕೆ ದಂತಗಳಿಲ್ಲ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆನೆಯ ಸಾವಿಗೆ ನಿಖರವಾದ ಕಾರಣ ಬಯಲಾಗಲಿದೆ’ ಎಂದು ತಿಳಿಸಿದ್ದಾರೆ. ಧೆಂಕನಲ್ ಕಾಡಿನ ಬಳಿಯ ಫಾರ್ಮ್ ಹೌಸ್ ಸಮೀಪದ ಪ್ರದೇಶವು ವರ್ಷಪೂರ್ತಿ ಆನೆಗಳ ನೆಲೆಯಾಗಿದೆ. ದಟ್ಟ ಕಾಡು ಪ್ರದೇಶವಾದ್ದರಿಂದ ಇಲ್ಲಿ ಆನೆಗಳು ಹೆಚ್ಚಾಗಿ ಕಂಡುಬರುತ್ತವೆ. ಇದೀಗ ಕಾಡಾನೆಯು ಮೃತಪಟ್ಟಿದ್ದಲ್ಲದೇ, ಅದನ್ನು ಯಾರಿಗೂ ತಿಳಿಯದಂತೆ ಹೂತು ಹಾಕಿರುವುದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕವಾಗಿ ಹಲವು ಆರೋಪಗಳು ಕೇಳಿಬರುತ್ತಿವೆ ಎನ್ನಲಾಗಿದೆ.
















