ತುಮಕೂರು, ಜೂನ್ 5: ವಿದೇಶಿ ಭಯೋತ್ಪಾದಕ ಸಂಘಟನೆಯೊಂದರ ಶಂಕಿತ ಉಗ್ರನೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ಸಂಪರ್ಕ ಹೊಂದಿದ್ದ ಹಾಗೂ ದೇಶದ ಭದ್ರತೆಗೆ ಧಕ್ಕೆ ತರುವ ರೀತಿಯ ಸಂದೇಶಗಳನ್ನು ರವಾನಿಸುತ್ತಿದ್ದ ಆರೋಪದ ಮೇಲೆ ತುಮಕೂರಿನ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಗಳು ನೀಡಿದ ರಹಸ್ಯ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ತುಮಕೂರು ನಗರ ಪೊಲೀಸರು, ಶ್ರೀರಾಮನಗರ ನಿವಾಸಿ ಅಲ್ಲಾಬಕ್ಷು (24) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯು ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಚೋದನಾತ್ಮಕ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದ ಎನ್ನಲಾಗಿದೆ.

ಎಕ್ಸ್ ಖಾತೆ ಮೂಲಕ ಶಂಕಿತ ಉಗ್ರನ ಸಂಪರ್ಕ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 20 ದಿನಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ವಿದೇಶಿ ಶಂಕಿತ ಉಗ್ರನೊಬ್ಬನೊಂದಿಗೆ ಅಲ್ಲಾಬಕ್ಷುಗೆ ಪರಿಚಯವಾಗಿತ್ತು. ಆರಂಭದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಶಂಕಿತ ವ್ಯಕ್ತಿಯ ಪೋಸ್ಟ್‌ಗಳಿಗೆ ಲೈಕ್ ಹಾಗೂ ಸಂದೇಶಗಳನ್ನು ಕಳುಹಿಸುತ್ತಿದ್ದ ಈತ, ನಂತರ ಎಕ್ಸ್ (X) ಖಾತೆಯ ಮೂಲಕ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಇವರಿಬ್ಬರ ನಡುವೆ ಹಲವು ವಿಷಯಗಳ ಕುರಿತು ಸಂಭಾಷಣೆ ನಡೆದಿದ್ದು, ದೇಶದ ಆಂತರಿಕ ಶಾಂತಿ ಮತ್ತು ಭದ್ರತೆಗೆ ಧಕ್ಕೆ ಉಂಟುಮಾಡುವ ರೀತಿಯ ಪ್ರಚೋದನಾತ್ಮಕ ಸಂದೇಶಗಳ ವಿನಿಮಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ದೇಶ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಚಾಟ್ ನಡೆಸಿರುವ ಆರೋಪವೂ ಕೇಳಿಬಂದಿದೆ.

ಕೇಂದ್ರ ತನಿಖಾ ಸಂಸ್ಥೆಗಳ ನಿಗಾದಲ್ಲಿ ಚಟುವಟಿಕೆ
ಅಲ್ಲಾಬಕ್ಷು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿದ್ದ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ನಿಗಾ ಇಟ್ಟಿದ್ದವು. ಆತನ ಸಂಪರ್ಕ ಜಾಲವನ್ನು ಪತ್ತೆಹಚ್ಚಿದ ಬಳಿಕ ರಾಜ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಕ್ಯಾತಸಂದ್ರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ತುಮಕೂರು ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮತ್ತೊಬ್ಬ ಶಂಕಿತನಿಗಾಗಿ ಹುಡುಕಾಟ
ಈ ಪ್ರಕರಣದಲ್ಲಿ ಬಂಧಿತನಿಗೆ ಸಹಕಾರ ನೀಡಿದ್ದ ಹಾಗೂ ಆತನೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಮತ್ತೊಬ್ಬ ವ್ಯಕ್ತಿಯ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ. ಆತನ ಪತ್ತೆಗಾಗಿ ತುಮಕೂರು ನಗರ ಪೊಲೀಸರು ಬಲೆ ಬೀಸಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ . ಈ ಕುರಿತು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಂದ್ರ ತನಿಖಾ ಸಂಸ್ಥೆಗಳ ಸಹಯೋಗದಲ್ಲಿ ವಿಚಾರಣೆ ನಡೆಯುತ್ತಿದೆ.
















