ಬೆಂಗಳೂರು, ಜೂನ್ 08: ಕೇರಳದ ಪ್ರಸಿದ್ಧ ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ನಡೆಯುತ್ತಿರುವ ವೈಶಾಖ ಮಹೋತ್ಸವದ ವೇಳೆ ಕರ್ನಾಟಕದಿಂದ ತೆರಳಿರುವ ಭಕ್ತರೊಂದಿಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ವಿಶೇಷವಾಗಿ ಮಹಿಳಾ ಭಕ್ತರನ್ನು ತಳ್ಳಾಡಲಾಗಿದೆ ಹಾಗೂ ಅವರ ಮೇಲೆ ಕಾಲಿನಿಂದ ನೀರು ಎರಚಲಾಗಿದೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿವೆ.
ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ವೈಶಾಖ ಮಹೋತ್ಸವ ನಡೆಯುತ್ತದೆ. ಮೇ ಅಥವಾ ಜೂನ್ ತಿಂಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಮಾತ್ರ ಈ ದೇವಸ್ಥಾನ ಭಕ್ತರ ದರ್ಶನಕ್ಕೆ ತೆರೆದಿರುತ್ತದೆ. ಉಳಿದ ಅವಧಿಯಲ್ಲಿ ದೇವಸ್ಥಾನ ಮುಚ್ಚಿರುತ್ತದೆ.

ಕಳೆದ ವರ್ಷ ಸಾಮಾಜಿಕ ಜಾಲತಾಣಗಳ ಮೂಲಕ ಈ ಕ್ಷೇತ್ರ ಹೆಚ್ಚು ಜನಪ್ರಿಯವಾಗಿದ್ದ ಹಿನ್ನೆಲೆಯಲ್ಲಿ, ಈ ಬಾರಿ ಕರ್ನಾಟಕದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ, ಅಲ್ಲಿ ಕನ್ನಡಿಗರಿಗೆ ಸೂಕ್ತ ಗೌರವ ಮತ್ತು ವ್ಯವಸ್ಥೆ ದೊರೆಯುತ್ತಿಲ್ಲ ಎಂದು ಕೆಲ ಭಕ್ತರು ಆರೋಪಿಸಿದ್ದಾರೆ.
ಮಹಿಳಾ ಭಕ್ತರೊಂದಿಗೆ ಅನುಚಿತ ವರ್ತನೆ ಆರೋಪ
ದೇವರ ದರ್ಶನಕ್ಕಾಗಿ 8 ರಿಂದ 10 ಗಂಟೆಗಳ ಕಾಲ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಭಕ್ತರು ತಿಳಿಸಿದ್ದಾರೆ. ಇದೇ ವೇಳೆ, ₹1,000 ಮುಖಬೆಲೆಯ ವಿಐಪಿ ಟಿಕೆಟ್ ವ್ಯವಸ್ಥೆಯಲ್ಲೂ ಅಕ್ರಮ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಹಣ ಪಾವತಿಸಿದರೂ ಸಮರ್ಪಕ ದರ್ಶನ ಸಿಗುತ್ತಿಲ್ಲ. ಮಹಿಳೆಯರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿದ್ದರೂ ಅವರನ್ನು ಮುಂದೆ ಸಾಗಲು ಅವಕಾಶ ನೀಡದೆ, ಸಿಬ್ಬಂದಿ ತಳ್ಳಾಡುತ್ತಿದ್ದಾರೆ ಎಂದು ಕರ್ನಾಟಕದ ಕೆಲ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ದೇವಸ್ಥಾನದ ಸಿಬ್ಬಂದಿ ಮಹಿಳಾ ಭಕ್ತರ ಮೇಲೆ ಕಾಲಿನಿಂದ ನೀರು ಎರಚಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಘಟನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಕನ್ನಡಿಗರನ್ನು ನಿಂದಿಸಿರುವ ಆರೋಪ
ಮಲಯಾಳಂ ಭಾಷೆ ತಿಳಿಯದ ಕನ್ನಡಿಗರನ್ನು ಗುರಿಯಾಗಿಸಿಕೊಂಡು ಕೆಲ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ.
“ಕೇರಳದ ಭಕ್ತರು ನಮ್ಮ ರಾಜ್ಯದ ಧರ್ಮಸ್ಥಳ ಮತ್ತು ಉಡುಪಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಬಂದಾಗ ಗೌರವದಿಂದ ನಡೆಸಿಕೊಳ್ಳಲಾಗುತ್ತದೆ. ಆದರೆ ಕೊಟ್ಟಿಯೂರಿನಲ್ಲಿ ಕನ್ನಡಿಗರಿಗೆ ಸೂಕ್ತ ಗೌರವ ಸಿಗುತ್ತಿಲ್ಲ” ಎಂದು ಕೆಲ ಭಕ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೀಗ ಅಲ್ಲಿಗೆ ಭೇಟಿ ನೀಡಿರುವ ಕೆಲವರು ವಿಡಿಯೊಗಳ ಮೂಲಕ ಕನ್ನಡಿಗರಿಗೆ ಮನವಿ ಮಾಡುತ್ತಿದ್ದು, ಪರಿಸ್ಥಿತಿ ಸುಧಾರಿಸುವವರೆಗೆ ಕೊಟ್ಟಿಯೂರು ಕ್ಷೇತ್ರಕ್ಕೆ ಭೇಟಿ ನೀಡದಂತೆ ಮನವಿ ಮಾಡುತ್ತಿದ್ದಾರೆ.
ಇನ್ನೊಂದೆಡೆ, ದರ್ಶನಕ್ಕಾಗಿ ವ್ಯವಸ್ಥಿತ ಮಾರ್ಗಸೌಲಭ್ಯ ಇಲ್ಲದೆ ಭಕ್ತರು ಗೇಟ್ ಸಮೀಪವೇ ಪರದಾಡುವಂತಾಗಿದೆ. ಕೆಲವರಿಗೆ ಮಾತ್ರ ಆದ್ಯತೆ ನೀಡಿ ಒಳಗೆ ಬಿಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ದೇವಸ್ಥಾನದಲ್ಲಿ ಭಕ್ತರೊಂದಿಗೆ ನಡೆದಿರುವ ಈ ವರ್ತನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.













