ಅಹ್ಮದಾಬಾದ್ : ಗುಜರಾತ್ನ ಸೂರತ್ ನಗರದಲ್ಲಿ ನೂರು ಮನೆಗಳನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಲಾಗಿದ್ದು, ಆದರೆ ಆ ಮನೆಗಳನ್ನು ಉರುಳಿಸಿದ್ದು ಯಾರು ಎಂಬುದು ಯಾರಿಗೂ ತಿಳಿಯದೆ ಒಂದು ನಿಗೂಢ ರಹಸ್ಯವಾಗಿ ಪರಿಣಮಿಸಿದೆ. ಸೂರತ್ನ ಲಿಂಬಾಯತ್ ಪ್ರದೇಶದ ಮಹಾದೇವನಗರ-3 ರಲ್ಲಿ ಈ ಘಟನೆ ನಡೆದಿದೆ. ಸುಮಾರು 100 ಕ್ಕೂ ಹೆಚ್ಚು ಕಡುಬಡವರ ಮನೆಗಳನ್ನು ಜೆಸಿಬಿ ಮತ್ತು ಬುಲ್ಡೋಜರ್ ಬಳಸಿ ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಈ ಕಾರ್ಯಾಚರಣೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸೂರತ್ ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಕಂದಾಯ ಇಲಾಖೆ ಸಂಪೂರ್ಣವಾಗಿ ಕೈತೊಳೆದುಕೊಂಡಿವೆ. ತಲೆಮಾರುಗಳಿಂದ ಅಲ್ಲಿಯೇ ವಾಸಿಸುತ್ತಿದ್ದ ನೂರಾರು ಕುಟುಂಬಗಳು ಯಾವುದೇ ಮುನ್ಸೂಚನೆ ಇಲ್ಲದೆ ಬೀದಿಗೆ ಬಿದ್ದಿದ್ದು, ತಮಗೆ ನ್ಯಾಯ ಬೇಕೆಂದು ಆಗ್ರಹಿಸುತ್ತಿದ್ದು ಲಿಂಬಾಯತ್ನ ಈ ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಬಹುತೇಕರು ದಿನಗೂಲಿ ಕಾರ್ಮಿಕರು ಮತ್ತು ಸಣ್ಣಪುಟ್ಟ ಕೆಲಸ ಮಾಡುವ ಬಡವರಾಗಿದ್ದಾರೆ. ಇತ್ತೀಚಿನ ರಾತ್ರಿಯೊಂದರಲ್ಲಿ ಯಾವುದೇ ಅಧಿಕೃತ ನೋಟಿಸ್ ನೀಡದೆ, ದಿಢೀರನೆ ಬುಲ್ಡೋಜರ್ಗಳೊಂದಿಗೆ ಬಂದ ಕೆಲವು ವ್ಯಕ್ತಿಗಳು ಸಾಲು ಸಾಲು ಮನೆಗಳನ್ನು ಧ್ವಂಸಗೊಳಿಸಲು ಪ್ರಾರಂಭಿಸಿದರು ಎಂಬುದ್ದಾಗಿದೆ.

ಈ ಕುರಿತು ಸ್ಥಳೀಯರು ವಿರೋಧಿಸಲು ಯತ್ನಿಸಿದರೂ, ಯಾವುದೇ ಕರುಣೆ ತೋರದೆ ಇಡೀ ಬಡಾವಣೆಯನ್ನು ಧ್ವಂಸ ಮಾಡಲಾಯಿತು. ಸಾಮಾನ್ಯವಾಗಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಗಳನ್ನು ಮಹಾನಗರ ಪಾಲಿಕೆ ಅಥವಾ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ ಪೊಲೀಸ್ ರಕ್ಷಣೆಯೊಂದಿಗೆ ಮಾಡಲಾಗುತ್ತದೆ. ಆದರೆ ಈ ಘಟನೆ ನಡೆದ ನಂತರ ಸಂತ್ರಸ್ತರು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಆಘಾತಕಾರಿ ಉತ್ತರ ಲಭಿಸಿದೆ. “ನಾವು ಅಂತಹ ಯಾವುದೇ ತೆರವು ಆದೇಶ ನೀಡಿಲ್ಲ, ಅಲ್ಲಿಗೆ ಯಾವುದೇ ಬುಲ್ಡೋಜರ್ ಕಳುಹಿಸಿಲ್ಲ” ಎಂದು ಸೂರತ್ ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ಸಂಸ್ಥೆಗಳು ಜವಾಬ್ದಾರಿಯನ್ನು ನಿರಾಕರಿಸಿರುವುದರಿಂದ, ಈ ಜಾಗದ ಮೇಲೆ ಕಣ್ಣಿಟ್ಟಿರುವ ಪ್ರಭಾವಿ ಭೂಮಾಫಿಯಾ ಅಥವಾ ಖಾಸಗಿ ಬಿಲ್ಡರ್ಗಳು ಗೂಂಡಾಗಳನ್ನು ಬಳಸಿ ಈ ಕೃತ್ಯ ಎಸಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಹಾಗೂ ಬಡವರನ್ನು ಹೆದರಿಸಿ ಓಡಿಸಲು ಈ ರೀತಿ ಕಾನೂನುಬಾಹಿರವಾಗಿ ಬುಲ್ಡೋಜರ್ ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಮನೆಗಳನ್ನು ಕಳೆದುಕೊಂಡು ಮಳೆ-ಗಾಳಿಗೆ ಸಿಲುಕಿರುವ ಸಂತ್ರಸ್ತರು ಸೂರತ್ ಜಿಲ್ಲಾಧಿಕಾರಿ ಕಚೇರಿ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸುತ್ತಿದ್ದಾರೆ. “ನಮ್ಮ ಕಣ್ಣೆದುರೇ ನೂರು ಮನೆಗಳು ಉರುಳಿಬಿದ್ದರೂ ಯಾರಿಗೆ ಗೊತ್ತು ಎಂದು ಆಡಳಿತ ವ್ಯವಸ್ಥೆ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ತಕ್ಷಣವೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಈ ಅಕ್ರಮ ಬುಲ್ಡೋಜರ್ ಕಾರ್ಯಾಚರಣೆಯ ಹಿಂದಿರುವ ಕಿಡಿಗೇಡಿಗಳನ್ನು ಬಂಧಿಸಬೇಕು,” ಎಂದು ಸಂತ್ರಸ್ತ ಕುಟುಂಬಗಳು ಕಣ್ಣೀರಿಡುತ್ತಿದ್ದಾರೆ ಎಂದು ತಿಳಿದುಬಂದಿದೆ.













