ಹಾಸನ: ಜಿಲ್ಲೆಯ ಅರಸಿಕೆರೆ ತಾಲೂಕಿನ ಜಾವಗಲ್-ಹಳೇಬೀಡು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ಹಳ್ಳಕ್ಕೆ ಉರುಳಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಭಾನುವಾರ ಸಂಭವಿಸಿದೆ ಎನ್ನಲಾಗಿದೆ.

ಜಿಲಾನಿ (28) ಮತ್ತು ಮೊಸಿನ್ (25) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಇತರ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅರಸೀಕೆರೆ ಮತ್ತು ಸ್ಥಳೀಯರ ಸಹಾಯದಿಂದ ತಕ್ಷಣವೇ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ನೇಹಿತನ ನಿಶ್ಚಿತಾರ್ಥಕ್ಕಾಗಿ ಐವರು ಯುವಕರು ಇನೋವಾ ಕಾರಿನಲ್ಲಿ ಅರಸೀಕೆರೆಯಿಂದ ಜಾವಗಲ್ ಮಾರ್ಗವಾಗಿ ಬೇಲೂರಿಗೆ ತೆರಳುತ್ತಿದ್ದರು. ಮೃತ ಜಿಲಾನಿ ಆಟೋಮೊಬೈಲ್ ಉದ್ಯಮ ನಡೆಸುತ್ತಿದ್ದು, ಮೊಸಿನ್ ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಆದರೆ ಕೆ.ಬಿ.ಹಾಳ್ ಬಳಿ ತಲುಪುತ್ತಿದ್ದಂತೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಆಳವಾದ ಹಳ್ಳಕ್ಕೆ ಉರುಳಿ ಬಿದ್ದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಜಿಲಾನಿ ಹಾಗೂ ಮೊಸಿನ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಜಾವಗಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎನ್ನಲಾಗಿದೆ.













