ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಒಂದು ದೊಡ್ಡ ಬೆಳವಣಿಗೆ ನಡೆದಿದೆ. ಸೂಪರ್ಸ್ಟಾರ್ ರಜನಿಕಾಂತ್ ಅವರ ಅಳಿಯ ವಿಶಾಖನ್, ಕೆ. ಅಣ್ಣಾಮಲೈ ಅವರ ಹೊಸ ರಾಜಕೀಯ ಸಂಘಟನೆಗೆ ಸೇರ್ಪಡೆಯಾಗಲಿದ್ದಾರೆ. ವಿಶಾಖನ್, ರಜನಿಕಾಂತ್ ಅವರ ಎರಡನೇ ಪುತ್ರಿ ಸೌಂದರ್ಯ ಅವರ ಪತಿ. ಇವರು ನಟ ಹಾಗೂ ಫಾರ್ಮಾ ಕಂಪನಿಯೊಂದರ ನಿರ್ದೇಶಕರೂ ಹೌದು. ಅಣ್ಣಾಮಲೈ ಅವರಿಗೆ ರಜನಿಕಾಂತ್ ಬೆಂಬಲವಿದೆ ಎಂಬ ಮಾತುಗಳು ಕೇಳಿಬರುತ್ತಿರುವಾಗಲೇ, ಅವರ ಅಳಿಯನೇ ಪಕ್ಷ ಸೇರುತ್ತಿರುವುದು ಕುತೂಹಲ ಮೂಡಿಸಿದ್ದು ಕೆ. ಅಣ್ಣಾಮಲೈ ಅವರು ಜೂನ್ 5 ರಂದು ಬಿಜೆಪಿಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ‘ವಿ ದ ಲೀಡರ್ಸ್’ ಎಂಬ ಹೊಸ ರಾಜಕೀಯ ಸಂಘಟನೆಯನ್ನು ಘೋಷಿಸಿದ್ದರು ಎಂಬುದ್ದಾಗಿತ್ತು.

ವಿಶೇಷ ಅಂದರೆ, ಈ ಸಂಘಟನೆ ಘೋಷಣೆಯಾದ ಕೇವಲ 24 ಗಂಟೆಗಳಲ್ಲಿ ಸುಮಾರು 14 ಲಕ್ಷ (13,85,763) ಜನರು ಸಕ್ರಿಯ ಸದಸ್ಯರಾಗಿ ನೋಂದಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಕಳೆದ 2020ರಲ್ಲಿ ತಮ್ಮ ಸಿವಿಲ್ ಸರ್ವೀಸ್ ಹುದ್ದೆ ತೊರೆದು ಅಣ್ಣಾಮಲೈ ಬಿಜೆಪಿ ಸೇರಿದ್ದರು. ಪಕ್ಷ ಸೇರಿದ ಕೆಲವೇ ದಿನಗಳಲ್ಲಿ ರಾಜ್ಯ ಉಪಾಧ್ಯಕ್ಷರಾಗಿ, ನಂತರ ತಮ್ಮ 37ನೇ ವಯಸ್ಸಿನಲ್ಲಿ ರಾಜ್ಯ ಅಧ್ಯಕ್ಷರಾಗಿ ದೊಡ್ಡ ಮಟ್ಟದಲ್ಲಿ ಬೆಳೆದರು. ಈಗ ತಮ್ಮ ರಾಜಕೀಯ ಬದುಕಿನ ಮುಂದಿನ ಹಂತ ಇದಾಗಿದೆ ಎಂದು ಹೇಳಿರುವ ಅಣ್ಣಾಮಲೈ, ಸಾಮಾನ್ಯ ಜನರು ಮತ್ತು ಯುವಕರನ್ನು ತಮ್ಮ ಸಂಘಟನೆಗೆ ಸ್ವಾಗತಿಸಿದ್ದಾರೆ.

ಹಾಗೂ ‘ವಿ ದ ಲೀಡರ್ಸ್’ ಹೆಸರಿನ ವೆಬ್ಸೈಟ್ ಮೂಲಕ ಸ್ವಯಂಸೇವಕರನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಣ, ಆರೋಗ್ಯ, ಪರಿಸರದಂತಹ ಕ್ಷೇತ್ರಗಳಲ್ಲಿ ತಳಮಟ್ಟದಿಂದ ಬದಲಾವಣೆ ತರಲು ಯುವಕರಿಗೆ ಅವರು ಕರೆ ನೀಡಿದ್ದಾರೆ. ಮುಂಬರುವ ತಮಿಳುನಾಡು ಲೋಕಸಭಾ ಚುನಾವಣೆಯಲ್ಲಿ ತಮ್ಮ ಹೊಸ ಸಂಘಟನೆ ಸ್ಪರ್ಧಿಸಲಿದೆ ಹಾಗೂ ಭವಿಷ್ಯಕ್ಕಾಗಿ ಅನೇಕ ಹೊಸ ನಾಯಕರನ್ನು ರೂಪಿಸಲಿದೆ ಎಂದು ಅಣ್ಣಾಮಲೈ ಈ ಹಿಂದೆ ಹೇಳಿದ್ದರು ಎನ್ನಲಾಗಿದೆ.















