ಮೈಸೂರು, ಜೂನ್ 11: ಜೂನ್ ತಿಂಗಳ ಅರ್ಧ ಭಾಗ ಮುಗಿಯುತ್ತಿದ್ದರೂ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆ ಸುರಿದಿದ್ದರೂ ಜಲಾಶಯಗಳಿಗೆ ನೀರಿನ ಹರಿವು ಹೆಚ್ಚಾಗದ ಕಾರಣ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಪ್ರಸ್ತುತ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 81 ಅಡಿಗೆ ಇಳಿದಿದ್ದು, ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 124 ಅಡಿಗಳಾಗಿದೆ.

ಸದ್ಯ ಜಲಾಶಯದಲ್ಲಿ ಕೇವಲ 11 ಟಿಎಂಸಿ ನೀರು ಸಂಗ್ರಹವಾಗಿದ್ದು, ಅದರಲ್ಲಿ 4 ರಿಂದ 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಹೀಗಾಗಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ ಸುಮಾರು 7 ಟಿಎಂಸಿಗೆ ಸೀಮಿತವಾಗಿದೆ.
ಇಂತಹ ಪರಿಸ್ಥಿತಿಯ ನಡುವೆಯೇ, ನ್ಯಾಯಾಲಯದ ನಿರ್ದೇಶನದಂತೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9 ಟಿಎಂಸಿ ನೀರು ಹರಿಸಬೇಕಾದ ಅನಿವಾರ್ಯತೆ ರಾಜ್ಯದ ಮುಂದಿದೆ. ಲಭ್ಯವಿರುವ ನೀರಿನ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಿಡುಗಡೆ ಮಾಡಬೇಕಾದ ಪರಿಸ್ಥಿತಿ ಉಂಟಾಗಿರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.
ನೀರಿನ ಕೊರತೆಯಿಂದ ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಕುಡಿಯುವ ನೀರಿನ ಪೂರೈಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ವೇಳೆ ಕಬಿನಿ ಜಲಾಶಯದಲ್ಲಿಯೂ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಕಳೆದ ಏಳು ರಿಂದ ಎಂಟು ವರ್ಷಗಳಲ್ಲಿ ಈ ಮಟ್ಟದ ನೀರಿನ ಕೊರತೆ ಕಂಡುಬಂದಿರಲಿಲ್ಲ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗದಿದ್ದರೆ ರಾಜ್ಯ ಸರ್ಕಾರದ ಮೇಲೆ ನೀರು ನಿರ್ವಹಣೆಯ ಒತ್ತಡ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ಈ ಸವಾಲನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂಬುದು ಗಮನ ಸೆಳೆದಿದೆ.
















