ಬೆಂಗಳೂರು: ರಾಜಧಾನಿಯಲ್ಲಿ ರಸ್ತೆ ಗುಂಡಿಗಳ ಕಾರಣಕ್ಕೆ ಮತ್ತೊಂದು ಸಾವು ಸಂಭವಿಸಿದೆ. ಇಂದು ಬೆಳಗ್ಗೆ ಮಾರತ್ ಹಳ್ಳಿ ಬಳಿ ಸಂಭವಿಸಿದ ಅಪಘಾತದಿಂದ ದ್ವಿಚಕ್ರ ವಾಹನದಲ್ಲಿ ಮಗಳನ್ನು ಕಾಲೇಜಿಗೆ ಕರೆದೊಯ್ಯುತ್ತಿದ್ದ ಮಹಿಳೆಯೊಬ್ಬರು ಅಸುನೀಗಿದ್ದು ಕಾಂತಾ ಎಂಬವರೇ ದುರ್ಮರಣಕ್ಕೀಡಾದ ಮಹಿಳೆ ಎನ್ನಲಾಗುತ್ತಿದೆ.

ರಸ್ತೆ ಗುಂಡಿಯಿಂದಾಗಿ ಆಯತಪ್ಪಿ ಬಿದ್ದ ಕಾಂತಾ ಅವರ ಮೇಲೆ ಶಾಲಾ ಬಸ್‌ವೊಂದು ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ವೈಟ್‌ಫೀಲ್ಡ್ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮಗಳು ನೇಹಾಳನ್ನು ಕಾಲೇಜಿಗೆ ಬಿಡಲು ಕಾಂತಾ ಅವರು ದ್ವಿಚಕ್ರ ವಾಹನದಲ್ಲಿ ಮಾರತ್ ಹಳ್ಳಿಯಿಂದ ಸಿದ್ದಾಪುರ ಮಾರ್ಗವಾಗಿ ಹೊರಟಿದ್ದರು. ಕಳೆದ ರಾತ್ರಿ ನಗರದಲ್ಲಿ ಸುರಿದ ಮಳೆಯಿಂದ ರಸ್ತೆ ಗುಂಡಿಗಳು ನೀರಿನಿಂದ ಆವೃತ್ತವಾಗಿದ್ದವು. ಅದರಿಂದ ಆಯತಪ್ಪಿ ಕಾಂತಾ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದಾರೆ.

ಹಾಗೂ ಈ ವೇಳೆ, ಹಿಂಬದಿಯಿಂದ ಬಂದ ಶಾಲಾ ಬಸ್ ಕಾಂತಾ ಅವರ ಮೇಲೆ ಹರಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಕಾಂತಾರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ರವಾನಿಸಲು ಯತ್ನಿಸಿದ್ದಾರೆ. ಆದರೆ, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಣ್ಮುಂದೆಯೇ ತಾಯಿಯ ಸಾವನ್ನು ಕಂಡ ಮಗಳು ನೇಹಾ ತೀವ್ರ ಆಘಾತಕ್ಕೊಳಗಾಗಿದ್ದಾರೆ. ರಸ್ತೆ ಗುಂಡಿಗಳಿಂದ ನಗರದಲ್ಲಿ ಸಾವುಗಳು ಸಂಭವಿಸುತ್ತಲೇ ಇವೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ, ಕಳಪೆ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ರಸ್ತೆಗಳು ಮೃತ್ಯುಕೂಪಗಳಾಗಿ ಬದಲಾಗುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.
















