ಶಿವಮೊಗ್ಗ: ಮಹಜರಿಗೆ ಕರೆದೊಯ್ದ ವೇಳೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ನೀಡಿ, ವಶಕ್ಕೆ ಪಡೆದಿರುವ ಘಟನೆ ಇಂದು ಬೆಳಗಿನ ಜಾವ ಹೊಳೆ ಬೆನವಳ್ಳಿಯ ರಿಂಗ್ ರೋಡ್ನಲ್ಲಿ ನಡೆದಿದ್ದು ಜೂನ್ 12 ರಂದು ನಡೆದಿದ್ದ ರೌಡಿಶೀಟರ್ ನರಸಿಂಹ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಧು ಎಂಬಾತನ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಪ್ರಕರಣ ಸಂಬಂಧ ಕೋಟೆ ಪೊಲೀಸರು, ಆರೋಪಿ ಮಧುನನ್ನು ಮಹಜರಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿ ಮಧು ಶೌಚಕ್ಕೆ ಹೋಗಬೇಕು ಎಂದಿದ್ದ. ಆಗ ಪೊಲೀಸರು ಹೊಳೆ ಬೆನವಳ್ಳಿಯ ರಿಂಗ್ ರೋಡ್ ಬಳಿ ಜೀಪ್ನಿಂದ ಕೆಳಗೆ ಇಳಿಸಿದ್ದರು. ಈ ವೇಳೆ ಕೋಟೆ ಪೊಲೀಸ್ ಠಾಣೆಯ ಕಾನ್ಸಟೇಬಲ್ ಅಂಜನಪ್ಪ ಅವರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗುತ್ತಿದೆ.

ಆಗ ಶರಣಾಗುವಂತೆ ಕೋಟೆ ಠಾಣೆಯ ಪಿಐ ಹರೀಶ್ ಪಟೇಲ್ ಅವರು ಸೂಚಿಸಿದರೂ ಸಹ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪಿಎಸ್ಐ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಶರಣಾಗದೆ ಹೋದಾಗ ಆತ್ಮ ರಕ್ಷಣೆಗೆ ಮಧು ಕಾಲಿಗೆ ಪಿಎಸ್ಐ ಗುಂಡು ಹಾರಿಸಿದ್ದಾರೆ. ಪರಿಣಾಮ ಗಾಯಗೊಂಡ ಮಧುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಜೂನ್ 12 ರಂದು ಗಾಂಧಿ ಬಜಾರ್ನ ಕರಿದೇವರ ಕೇರಿಯಲ್ಲಿ ರೌಡಿಶೀಟರ್ ನರಸಿಂಹನ ಕೊಲೆಯಾಗಿತ್ತು. ಇಸ್ಪಿಟ್ ಆಡುತ್ತಿದ್ದಾಗ ನರಸಿಂಹನ ಮೇಲೆ ವಿರೋಧಿ ಗ್ಯಾಂಗ್ ಅನಿಲ್ ಅಲಿಯಾಸ್ ಅಂಬು ಹಾಗೂ ಆತನ ಸಹಚರರಾದ ಮಧು, ರವಿ, ಕಾರ್ತಿಕ್ ಅಲಿಯಾಸ್ ಕತ್ತೆ ಕಾರ್ತಿಕ್, ಶಬರೀಶ್ ಎಂಬುವರು ಬೈಕ್ನಲ್ಲಿ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ಈ ಪ್ರಕರಣ ದಾಖಲಿಸಿಕೊಂಡ ಕೋಟೆ ಪೊಲೀಸರು ಆರೋಪಿಗಳನ್ನು ಭದ್ರಾವತಿಯಲ್ಲಿ ಬಂಧಿಸಿದ್ದರು. ಕೊಲೆಯಾದ ನರಸಿಂಹನ ಪತ್ನಿ ಸ್ನೇಹ ಅವರು ಅಂಬು ಮತ್ತು ಅವರ ತಂಡ ಕೊಲೆ ಮಾಡಿದೆ ದೂರು ನೀಡಿದ್ದರು. ಆ ಬಳಿಕ ಪೊಲೀಸರು ಮೂರು ತಂಡಗಳನ್ನು ರಚಿಸಿ ತನಿಖೆ ಪ್ರಾರಂಭಿಸಿದ್ದರು. ಪರಾರಿಯಾಗಿದ್ದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೊನೆಗೆ ಭದ್ರಾವತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದರು. ಸ್ಥಳ ಮಹಜರಿಗೆ ಕರೆದಯ್ಯುವ ವೇಳೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರಿಂದ ಮಧು ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇನ್ನು ಕೊಲೆಯಾದ ನರಸಿಂಹ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ.
















